Media Release

Panir - Ullal, Sep 8, 2023 : Nativity Feast was celebrated with devotion at Our Lady of Mercy Church - Panir.

ಪಾನೀರಿನಲ್ಲಿರುವ ದಯಾಮಾತೆಯ ದೇವಾಲಯದಲ್ಲಿ ಸಂಭ್ರಮದ ಮಾತೆ ಮರಿಯಮ್ಮನವರ ಹುಟ್ಟು ಹಬ್ಬದ ಆಚರಣೆ

ಸೆಪ್ಟಂಬರ್ 8 ರಂದು ಉಳ್ಳಾಲದ ಪಾನೀರಿನಲ್ಲಿರುವ ದಯಾಮಾತೆ ದೇವಾಲಯದಲ್ಲಿ ಯೇಸುವಿನ ತಾಯಿಯಾದ, ಮಾತೆ ಮರಿಯಮ್ಮನವರ ಹುಟ್ಟುಹಬ್ಬ ಮತ್ತು ತೆನೆ ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು. ನವ ದಿನಗಳ ನಿರಂತರ ನೋವೆನ (ಆರಾಧನೆ) ಮತ್ತು ಪುಟಾಣಿ ಮಕ್ಕಳಿಂದ ಪುಷ್ಪಾರ್ಚನೆಗೈದು,ಸಾಂಭ್ರಮಿಕ ಪೂಜೆ ನೆರವೇರಿಸಲಾಯಿತು. ಹಬ್ಬದ ದಿನದಂದು ಧರ್ಮ ಕೇಂದ್ರದ ಗುರುಗಳಾದ ವಂದನೀಯ ವಿಕ್ಟರ್ ಡಿಮೆಲ್ಲೋರವರು ಪ್ರಾರ್ಥನಾ ವಿಧಿ ನೆರವೇರಿಸಿದರು. ನಂತರ ಅಲಂಕೃತಗೊಂಡ ಬಾಲಮಾತೆ ಮರಿಯಮ್ಮನವರ ಪುತ್ಥಳಿ ಮತ್ತು ರೈತರು ಬೆಳೆದ ಮೊದಲ ತೆನೆಯನ್ನು ಗುರಿಕಾರರು ಕೈಗಳಲ್ಲಿ ಹಿಡಿದುಕೊಂಡು ದೇವಾಲಯಕ್ಕೆ ಸಾಗಿದರು. ದೇವಾಲಯದ ಮುಂಭಾಗದಲ್ಲಿ ಮಾತೆ ಮರಿಯಮ್ಮನವರ ಪುತ್ಥಳಿಗೆ ಪುಷ್ಪಾರ್ಚನೆಯನ್ನು ಮಾಡುತ್ತ ನಮಿಸಿದರು. ಧರ್ಮಕೇಂದ್ರದ ಗುರುಗಳಾದ ವಂದನೀಯ ವಿಕ್ಟರ್ ಡಿಮೆಲ್ಲೊ ಮತ್ತು ಅಲೋಶಿಯಸ್ ಬೀರಿಯ ವಂದನೀಯ ಗುರುಗಳಾದ ಕಿರಣ್ ಕೋತ್ ರವರು ಮಾತೆಗೆ ಕೃತಜ್ಞತಾ ಪೂಜೆಯನ್ನು ನೆರೆವೇರಿಸಿದರು.

ತದ ಬಳಿಕ ತೆನೆಗಳಿಗೆ ಆಶೀರ್ವದಿಸಿದರು. ಪೂಜೆಯ ಬಳಿಕ ತೆನೆಯನ್ನು ಪ್ರತಿ ಕುಟುಂಬಸ್ಥರಿಗೆ ವಿತರಿಸಲಾಯಿತು. ಐ.ಸಿ.ವೈ.ಎಮ್ ನ ಯುವಕ- ಯುವತಿಯರು ಕಬ್ಬನ್ನು ಮತ್ತು ಹಾಲನ್ನು ಸರ್ವರಿಗೂ ವಿತರಿಸಿದರು. ದೇವನು ದಯಪಾಲಿಸಿದ ಪ್ರಥಮ ಫಲಕ್ಕೆ ವಂದಿಸಿ, ವರ್ಷಪೂರ್ತಿ ನೆಮ್ಮದಿ ಮತ್ತು ಸಮೃದ್ಧಿಯನ್ನು ಸರ್ವರಿಗೂ ದಯಪಾಲಿಸಲಿ ಎಂದು ಬೇಡಿದರು. ಕ್ರೈಸ್ತ ಭಕ್ತಾದಿಗಳು ಪಾವಿತ್ರತೆಯೊಂದಿಗೆ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

ಈ ಸಂದರ್ಭದಲ್ಲಿ ದಯಾಮಾತೆ ದೇವಾಲಯದ ಉಪಾಧ್ಯಕ್ಷರಾದ ಶ್ರೀಮತಿ ಸರಿತ ಡಿಸೋಜಾ , ಕಾರ್ಯದರ್ಶಿಗಳಾದ ಶ್ರೀಮತಿ ಗ್ರೇಟ್ಟ ಡಿಕುನ್ನ, ಮಂಗಳೂರು ಕಥೋಲಿಕ್ ಸಭೆಯ ಕೇಂದ್ರಿಯ ಅಧ್ಯಕ್ಷರಾದ ಶ್ರೀಯುತ ಅಲ್ವಿನ್ ಡಿಸೋಜಾ, ಪಾನೀರ್ ಕಥೋಲಿಕ್ ಸಭೆಯ ಅಧ್ಯಕ್ಷರಾದ ಉರ್ಬನ್ ಫೆರಾವೋ, ಎಸ್.ವಿ.ಪಿ ಸಭೆಯ ಅಧ್ಯಕ್ಷರಾದ ಶ್ರೀಯುತ ಫ್ರಾಂಕಿ ಕುಟ್ಟಿನ , ವಿವಿಧ ಸಂಘ ಸಂಸ್ಥೆಯ ಮತ್ತು ಐ.ಸಿ.ವೈ.ಎಂ ಹಾಗೂ ವೈ.ಸಿ.ಎಸ್ ನ ಪದಾಧಿಕಾರಿಗಳು ಮತ್ತು ಸದಸ್ಯರು, ಏಳು ಕಾನ್ವೆಂಟಿನ ಧರ್ಮಭಗಿನಿಯರು, ಎಲ್ಲಾ ವಾರ್ಡಿನ ಗುರಿಕಾರರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು. ಶ್ರೀಮತಿ ಬೆನಿಷಾ ಮತ್ತು ಶ್ರೀಮತಿ ಲವೀನರ ಮುಂದಾಳತ್ವದಲ್ಲಿ ಹಬ್ಬದ ಪೂಜೆಯ ಗಾಯನವನ್ನು ಮಕ್ಕಳು ನಡೆಸಿಕೊಟ್ಟರು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.