Photo : stannchurchnala.com

ಮಡಂತ್ಯಾರು ಧರ್ಮಕ್ಷೇತ್ರ ಅಸ್ತಿತ್ವವನ್ನು ಪಡೆದಾಗ ಬಹಳಷ್ಟು ವಿಸ್ತಾರವಾಗಿತ್ತು. 1895ರ ದಾಖಲೆಗಳ ಪ್ರಕಾರ ಮಡಂತ್ಯಾರು ಧರ್ಮಕ್ಷೇತ್ರದಲ್ಲಿ ಒಂಬತ್ತು ವಾಳೆ(ವಾರ್ಡು)ಗಳಲ್ಲಿ ನಾಳ ವಾಳೆಯು ಒಂದಾಗಿತ್ತು. ವಾಳೆಯಲ್ಲಿ 25 ಕುಟುಂಬಗಳಿದ್ದು ಸುಮಾರು 125 ಜನ ಸದಸ್ಯರಿದ್ದರು. ಇದ್ದ ಎಲ್ಲಾ ಕುಟುಂಬದವರು ಕೃಷಿಕರು ಹಾಗೂ ಶ್ರಮಜೀವಿಗಳು. ರವಿವಾರದ ಬಲಿಪೂಜೆಗೆ ನಾಳಾದಿಂದ ಮಡಂತ್ಯಾರು ಧರ್ಮಕ್ಷೇತ್ರಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ಆ ಸಮಯದಲ್ಲಿ ಫಾ| ಜೇಕಬ್ ಸಿಕ್ವೇರಾ ಮಡಂತ್ಯಾರಿನ ಧರ್ಮಗುರುಗಳಾಗಿದ್ದರು. ಅತೀ ವಂದನೀಯ ಸ್ವಾಮಿ ಪಗಾನಿಯರು ಮಂಗಳೂರು ಧರ್ಮಕ್ಷೇತ್ರದ ಬಿಷಪರಾಗಿದ್ದರು.

ಮಂಡತ್ಯಾರಿನ ಇಗರ್ಜಿಗೆ ಬಂದು ತಮ್ಮ ಪ್ರಾರ್ಥನಾ ವಿಧಿಗಳು ಮತ್ತು ಇತರ ಕಾರ್ಯಗಳಲ್ಲಿ ಭಾಗವಹಿಸಲು ತುಂಬಾ ದೂರ ನಡೆಯಬೇಕಾಗಿತ್ತು. ಈ ತೊಂದರೆಯನ್ನು ಗಮನಿಸಿದ ಅಂದಿನ ಧರ್ಮಗುರುಗಳಾಗಿದ್ದ ಫಾ| ವಿಲಿಯಂ ವೇಗಸ್‍ರವರು ನಾಳದ ಗುರಿಕಾರರಾಗಿದ್ದ ಶ್ರೀ ಪಿಯಾದ್ ಡೇಸಾರವರ ಮುಂದಾಳತ್ವದಲ್ಲಿ ಶ್ರೀ ಸಾಲ್ವದೊರ್ ಡೇಸಾರವರ ಮನೆಯಲ್ಲಿ ಪೂಜಾ ವಿಧಿಗಳನ್ನು ಮಾಡಲು ಪ್ರಾರಂಭಿಸಿದರು. 1969 ಫೆಬ್ರವರಿ 13, ಗುರುವಾರದಂದು ಪ್ರಪ್ರಥಮ ಬಾರಿಗೆ ನಾಳದಲ್ಲಿ ಬಲಿಪೂಜೆ ಸಲ್ಲಿಸಲಾಯಿತು. ತಮ್ಮದೇ ಅನ್ನುವ ಒಂದು ಇಗರ್ಜಿ ಸ್ಥಾಪಿಸಬೇಕೆನ್ನುವ ಆಸೆ ಹೊಂದಿದ್ದ ನಾಳದ ಪ್ರಜೆಗಳು ಬಲಿಪೂಜೆಗೆ ಒಟ್ಟು ಸೇರುವ ಸಂದರ್ಭದಲ್ಲಿ ಪ್ರತಿಯೊಬ್ಬರು ಒಂದು ಆಣವನ್ನು ಇಗರ್ಜಿ ಕಟ್ಟಲೆಂದು ಗುರಿಕಾರರಲ್ಲಿ ಕೊಟ್ಟು ಕೂಡಿಡುತ್ತಿದ್ದರು. ಅಂತೆಯೇ ಅವರು ಕೂಡಿಟ್ಟದ್ದು ಸುಮಾರು ರೂ. 25,000/- ತೀರಿಹೋದವರ (ದೈವಾದೀನರಾದವರ) ಶವದ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಮಡಂತ್ಯಾರಿನಲ್ಲಿಯೇ ನಡೆಸುವುದು ತುಂಬಾ ದೂರವಾಗಿದ್ದರಿಂದ ದಿ| ಸಾಲ್ವದೊರ್ ಡೇಸಾರವರು ಜಾರಿಗೆಬೈಲು ಎಂಬಲ್ಲಿ 2 ಎಕ್ರೆ ಜಾಗವನ್ನು ರುದ್ರಭೂಮಿಯಾಗಿ ಉಪಯೋಗಿಸಲು ದಾನವಾಗಿ ನೀಡಿದರು. 1979ರಲ್ಲಿ ಇಗರ್ಜಿ ಕಟ್ಟಲು ಒಂದು ಎಕ್ರೆ ಜಾಗವನ್ನು ದಿ| ಜೆರೋಮ್ ಪಾಯ್ಸ್ ಹಾಗೂ ಕುಟುಂಬದವರು ಮಾವಿನಕಟ್ಟೆ ಬಳಿ ದಾನವಾಗಿ ನೀಡಿದರು. 1980 ರಲ್ಲಿ ಅಂದಿನ ಧರ್ಮಗುರುಗಳಾದ ವಂ| ಫಾ| ಲಿಗೋರಿ ಡಿಸೋಜಾರವರು ಇಗರ್ಜಿ ಕಟ್ಟಲು ಶಿಲಾನ್ಯಾಸವನ್ನು ನೆರವೇರಿಸಿದರು. 1982 ಮೇ 5ರಂದು ವಂ|ಫಾ| ಲಿಗೋರಿ ಡಿಸೋಜಾರವರ 60ನೇ ಜನ್ಮದಿನದಂದು ಇಗರ್ಜಿಯನ್ನು ಸಂತ ಅನ್ನಾ ಮಾತೆಗೆ ಅರ್ಪಿಸಿ, ಉದ್ಘಾಟಿಸಿ, ಆಶೀರ್ವದಿಸಲಾಯಿತು.

1983 ರಲ್ಲಿ ಬಂದ ವಂ|ಫಾ| ಫ್ರೆಡ್ ವಿ. ಪಿರೇರಾ ರವರು ಇಗರ್ಜಿಗೆ ಇನ್ನಷ್ಟು ಮೆರುಗು ತಂದುಕೊಟ್ಟರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ 1982ರಲ್ಲಿ ಬಂದ ವಂ|ಫಾ| ಲಾರೆನ್ಸ್ ರೊಡ್ರಿಗಸ್ ರವರು ನಾಳ ಇಗರ್ಜಿಯ ಏಳಿಗೆಗಾಗಿ ಪಟ್ಟ ಅವಿರತ ಶ್ರಮ ಆವಿಸ್ಮರಣಿಯ. ಹತ್ತಿರವಿದ್ದ ಸುಮಾರು 95 ಸೆಂಟ್ಸ್ ಜಾಗವನ್ನು ಸರ್ಕಾರದಿಂದ ಪಡೆದು ಇಗರ್ಜಿ ಹೆಸರಲ್ಲಿ ಮಾಡಿ, ಅದರಲ್ಲಿ ಸುಮಾರು 400 ರಬ್ಬರ್ ಗಿಡವನ್ನು ನೆಟ್ಟು, ಇಗರ್ಜಿಗೆ ಆದಾಯ ಬರುವಂತೆ ಮಾಡಿದರು. ಇಗರ್ಜಿಯಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯನ್ನೂ ಮಾಡಿಸಿದರು. ಅವರ ನಂತರ ವಂ|ಫಾ| ಅಲೆಕ್ಸಾಂಡರ್ ರವರು 2 ವರ್ಷ ಹಾಗೂ ವಂ|ಫಾ| ಚಾರ್ಲ್ಸ್ ನೊರೋನ್ಹಾ ರವರು 7 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಬಂದ ವಂ|ಫಾ| ಹೆರಾಲ್ಡ್ ಮಸ್ಕರೇನಸ್ ರವರ ಕಾಲದಲ್ಲಿ ಇಗರ್ಜಿಯನ್ನು ಸ್ವಲ್ಪ ನವೀಕರಿಸಿದರು. ಇಗರ್ಜಿಗೊಳಪಟ್ಟ ಗಡಿ ರೇಖೆಯನ್ನು ಸರಿಪಡಿಸಿದರು. ಅವರ ಕಾಲದಲ್ಲಿ ಇಗರ್ಜಿಗೆ ಕುಟುಂಬಗಳೂ ಹೆಚ್ಚಾಗತೊಡಗಿದವು. ಆ ಕಾರಣದಿಂದಾಗಿ ಇಗರ್ಜಿಯನ್ನು ಧರ್ಮಕ್ಷೇತ್ರವನ್ನಾಗಿಸುವ ಪ್ರಯತ್ನವೂ ಜಾರಿಯಲ್ಲಿತ್ತು. ಅದರಂತೆ ಶ್ರೀ ಮಾಡ್ತಾ ಗೊನ್ಸಾಲ್ವಿಸ್ ರವರಿಂದ ಜಾರಿಗೆಬೈಲು ಹತ್ತಿರ 1 ಎಕ್ರೆ 48 ಸೆಂಟ್ಸ್ ಜಾಗವನ್ನು ಖರೀದಿಸಿದರು. ಆದರೆ 2011 ರಲ್ಲಿ ಧರ್ಮಕ್ಷೇತ್ರವೆಂದು ಘೋಷಣೆಯಾದಾಗ ಜಾಗಕ್ಕೆ ತೆಗೆದುಕೊಂಡ ಹಣವನ್ನು ವಾಪಾಸು ಕೊಟ್ಟು, ಜಾಗವನ್ನು ದಾನವಾಗಿ ಕೊಟ್ಟರು.

ನಂತರ ವಂ|ಫಾ| ವಲೇರಿಯನ್ ಫ್ರಾಂಕ್‍ರವರು 5 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ವಂ|ಫಾ| ಅನಿಲ್ ಡಿಸೋಜಾರವರು ಸಹಾಯಕ ಧರ್ಮಗುರುಗಳಾಗಿ, 3 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರ ಸಂದರ್ಭದಲ್ಲಿ ಇಗರ್ಜಿಯು ತನ್ನ 25ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಅದರ ಸವಿನೆನಪಿಗಾಗಿ ಇಗರ್ಜಿಯ 5 ಜನ ಮಕ್ಕಳಿಗೆ ಪರಮಪ್ರಸಾದವನ್ನು ನೀಡಲಾಯಿತು. ಆಗ ಅತೀ ವಂದನೀಯ ಸ್ವಾಮಿ ಅಲೋಶಿಯಸ್ ಡಿಸೋಜಾರವರು ಮಂಗಳೂರು ಧರ್ಮಕ್ಷೇತ್ರದ ಬಿಷಪರಾಗಿದ್ದರು.

ಮಡಂತ್ಯಾರಿನ ಧರ್ಮಗುರುಗಳಿಗೆ ಇಲ್ಲಿಗೆ ಬಂದು ಬಲಿಪೂಜೆ ಅರ್ಪಿಸಲು ಅನುಕೂಲವಾಗದಿದ್ದಾಗ, ಮಡಂತ್ಯಾರಿನವರೇ ಆದ ಕಾರ್ಮೆಲೈಟ್ಸ್ ಗುರುಗಳು ಹಾಗೂ ಉಜಿರೆಯ ದಯಾಳ್‍ಬಾಗ್‍ನ ಕಪುಚಿನ್ ಗುರುಗಳು ಬಂದು ಸೇವೆ ಸಲ್ಲಿಸುತ್ತಿದ್ದರು. ಇಗರ್ಜಿಯ ಪ್ರತಿಯೊಂದು ಕಾರ್ಯಗಳಲ್ಲಿಯೂ ಈ ಎರಡೂ ಕೇಂದ್ರದ ಗುರುಗಳ ನಿಸ್ವಾರ್ಥ ಸೇವೆಯನ್ನು ಮರೆಯುವಂತಿಲ್ಲ. 1982 ರಿಂದ ಇಲ್ಲಿಯವರೆಗೆ ಅನೇಕ ಗುರುಗಳು ನಾಳದ ಆತ್ಮಿಕ ಹಾಗೂ ಧಾರ್ಮಿಕ ಅಗತ್ಯತೆಗಳಿಗೆ ನೆರವಾಗಿರುವುದರ ಜೊತೆಗೆ, ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಅಂತೆಯೇ ಸಲೇಶಿಯನ್ ಹಾಗೂ ಅರ್ಸುಲೈನ್ ಧರ್ಮಭಗಿನಿಯರು ನಮ್ಮ ಮಕ್ಕಳಿಗೆ ನೀತಿ ಶಿಕ್ಷಣವನ್ನು ಭೋದಿಸುತ್ತಿದ್ದರು ಮತ್ತು ಇಗರ್ಜಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

ಶ್ರೀ ಜೋನ್ ರೇಗೋ, ಶ್ರೀ ಫ್ರಾನ್ಸಿಸ್ ಫೆರ್ನಾಂಡಿಸ್, ಶ್ರೀ ವಿಲಿಯಂ ಫೆರ್ನಾಂಡಿಸ್, ಶ್ರೀ ತೋಮಸ್ ಡಿಕೋಸ್ತಾ ಹಾಗೂ ಶ್ರೀ ಅಲೆಕ್ಸ್ ವೇಗಸ್‍ರವರು ಇಗರ್ಜಿಯ ಗುರಿಕಾರರಾಗಿ ಸೇವೆ ಸಲ್ಲಿಸಿರುತ್ತಾರೆ. ಶ್ರೀ ವಿಲಿಯಂ ಫೆರ್ನಾಂಡಿಸ್‍ರವರು ಸುಮಾರು 18 ವರ್ಷಗಳ ಕಾಲ ಗುರಿಕಾರರಾಗಿ ಸೇವೆ ಸಲ್ಲಿಸಿದ್ದಾರೆ. ದಿ| ಗಿಲ್ಬರ್ಟ್ ಫೆರ್ನಾಂಡಿಸ್‍ರವರು ಸುಮಾರು 29 ವರ್ಷಗಳ ಕಾಲ (ಮಿರ್ನ್ಯಾಮ್) ಆಗಿ ಸೇವೆ ಸಲ್ಲಿಸಿದ್ದಾರೆ. ಇಗರ್ಜಿಗೆ ಬೇಕಾದ ಅನೇಕ ಮೂಲಭೂತ ಸೌಲಭ್ಯಗಳನ್ನು ಇಗರ್ಜಿಯ ಜನರೇ ದಾನವಾಗಿ ಕಲ್ಪಿಸಿಕೊಟ್ಟರು. ತದನಂತರದ ದಿನಗಳಲ್ಲಿ ನಾಳ ಇಗರ್ಜಿಯು ಧರ್ಮಕ್ಷೇತ್ರವಾಗಬೇಕೆಂಬ ಪ್ರಯತ್ನಗಳೂ ಜಾರಿಯಲ್ಲಿದ್ದವು.

2011 ನವೆಂಬರ್ 30 ರಂದು ಸಂತ ಅನ್ನಾ ಮಾತೆಯ ಇಗರ್ಜಿಯನ್ನು ಧರ್ಮಕ್ಷೇತ್ರವೆಂದು ಘೋಷಿಸಲಾಯಿತು. ಆಗ ಅತೀ ವಂದನೀಯ ಸ್ವಾಮಿ ಅಲೋಶಿಯಸ್ ಡಿಸೋಜಾರವರು ಮಂಗಳೂರು ಧರ್ಮಕ್ಷೇತ್ರದ ಬಿಷಪರಾಗಿದ್ದರು. ಈ ಸುಸಂದರ್ಭದಲ್ಲಿ ವಂ|ಫಾ| ಲಾರೆನ್ಸ್ ಮಸ್ಕರೇನಸ್‍ರವರು ಮಡಂತ್ಯಾರಿನ ಧರ್ಮಗುರುಗಳಾಗಿ, ವಂ|ಫಾ| ರೋಹಿತ್ ಡಿಕೋಸ್ತಾರವರು ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಧರ್ಮಕ್ಷೇತ್ರವನ್ನು ಎಸ್.ವಿ.ಡಿ. ಕೇಂದ್ರದ ಗುರುಗಳ ಅಧೀನಕ್ಕೆ 5 ವರ್ಷಗಳ ಕಾಲಕ್ಕೆ ಕೊಡಲಾಯಿತು. ಅಂದಿಗೆ ನಮ್ಮ ಬಹು ವರ್ಷಗಳ ಕನಸು ಈಡೇರಿತು. ಸಂತ ಅನ್ನಾ ಮಾತೆಯ ಧರ್ಮಕ್ಷೇತ್ರಕ್ಕೆ ಮೊಟ್ಟ ಮೊದಲ ಧರ್ಮಗುರುಗಳಾಗಿ ವಂ|ಫಾ| ರಿಚ್ಚಾರ್ಡ್ ಡಿಅಲ್ಮೇಡಾ ಎಸ್.ವಿ.ಡಿ. ರವರು ನಿಯೋಜಿತರಾದರು.

ಪ್ರಾರಂಭದ ದಿನಗಳಲ್ಲಿ ಧರ್ಮಗುರುಗಳು ಮಡಂತ್ಯಾರಿನಲ್ಲಿಯೇ ವಾಸ್ತವ್ಯಹೂಡುತ್ತಿದ್ದರು. ಆ ನಂತರದಲ್ಲಿ ಶ್ರೀ ಮಾಡ್ತಾ ಗೊನ್ಸಾಲ್ವಿಸ್‍ರವರಿಂದ ದಾನವಾಗಿ ಪಡೆದ ಜಾಗದಲ್ಲಿ ಗುರುಗಳ ವಾಸ್ತವ್ಯಕ್ಕಾಗಿ ಒಂದು ಮನೆಯನ್ನು ಕಟ್ಟಲಾರಂಭಿಸಿ, 2012 ಅಕ್ಟೋಬರ್ 29 ರಂದು ಉದ್ಘಾಟಿಸಲಾಯಿತು. ತುಂಬಾ ಹುರುಪಿನಲ್ಲಿಯೇ ಗುರುಗಳು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಚರ್ಚ್‍ನಲ್ಲಿ ಸಂತ ಅನ್ನಾ ಮಾತೆಯ ವಾರ್ಡು, ನಿತ್ಯಾಧಾರ ಮಾತೆಯ ವಾರ್ಡು ಹಾಗೂ ಯೇಸುವಿನ ಪವಿತ್ರ ಹೃದಯದ ವಾರ್ಡು- ಹೀಗೆಂದು 3 ವಾರ್ಡುಗಳನ್ನು ರಚಿಸಲಾಯಿತು. ಪ್ರತಿಯೊಂದು ವಾರ್ಡಿಗೂ ಗುರಿಕಾರ ಹಾಗೂ ಪ್ರತಿನಿಧಿಗಳನ್ನು ನೇಮಿಸಲಾಯಿತು. ಚರ್ಚಿನ ಮೊಟ್ಟಮೊದಲ ಪಾಲನಾ ಮಂಡಳಿಯು ಸ್ಥಾಪನೆಗೊಂಡಿತು. ಎಲ್ಲಾ ಪ್ರಮುಖ ಧಾರ್ಮಿಕ ಹಬ್ಬಗಳನ್ನು ಚರ್ಚಿನಲ್ಲಿಯೇ ಆಚರಿಸಲು ಆರಂಭಿಸಿದೆವು. ಪ್ರತಿನಿತ್ಯ ಬಲಿಪೂಜೆಯನ್ನು ಅರ್ಪಿಸಲು ಧರ್ಮಗುರುಗಳ ನಿವಾಸದ ಬಳಿಯಲ್ಲಿಯೇ ಒಂದು ಚಿಕ್ಕ ಪ್ರಾರ್ಥನಾ ಮಂದಿರವನ್ನು ಕಟ್ಟಲಾಯಿತು. 2013 ಜನವರಿ 10 ರಂದು ಅಂದಿನ ಮಂಗಳೂರು ಧರ್ಮಕ್ಷೇತ್ರದ ಬಿಷಪರಾಗಿದ್ದ ಅತೀ ವಂದನೀಯ ಸ್ವಾಮಿ ಅಲೋಶಿಯಸ್ ಡಿಸೋಜಾರವರು ಉದ್ಘಾಟಿಸಿದರು. ಚರ್ಚಿನ ಜನರೆಲ್ಲಾ ತುಂಬಾ ಸಕ್ರೀಯವಾಗಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ವಂ|ಫಾ| ರಿಚ್ಚಾರ್ಡ್ ಡಿಅಲ್ಮೇಡಾ ಎಸ್.ವಿ.ಡಿ.ರವರು 2 ವರ್ಷಗಳ ಕಾಲ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಚರ್ಚಿನ ಹಾಗೂ ಸುತ್ತಮುತ್ತಲಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಆ ನಂತರದಲ್ಲಿ ವಂ| ಫಾ| ವಾಲ್ಟರ್ ಮೆಂಡೋನ್ಸಾ ಎಸ್.ವಿ.ಡಿ. ರವರು ನಮ್ಮ ಧರ್ಮಗುರುಗಳಾಗಿ 2013 ಜೂನ್ 04 ರಂದು ನಿಯೋಜಿತರಾದರು. ಅವರು ಧರ್ಮಗುರುಗಳ ನಿವಾಸದ ಬಳಿ ಇದ್ದ ಜಾಗದಲ್ಲಿ ಸುಮಾರು 200 ರಬ್ಬರ್ ಗಿಡಗಳನ್ನು ನೆಟ್ಟರು, ಜೊತೆಗೆ ಇಂಟರ್‍ಲಾಕ್ಸ್‍ಗಳನ್ನು ಹಾಕಿಸಿದರು. ಸುಮಾರು 2 ವರ್ಷಗಳ ಕಾಲ ಇವರು ತಮ್ಮ ಸೇವೆಯನ್ನು ಸಲ್ಲಿಸಿದರು.

ಕಡಿಮೆ ಕುಟುಂಬಗಳಿದ್ದರೂ, 7 ಜನ ಧರ್ಮಗುರುಗಳಾಗಿಯೂ, 10 ಜನ ಧರ್ಮಭಗಿನಿಯರಾಗಿಯೂ ದೇವರ ಸೇವೆಗೆಂದು ತಮ್ಮನ್ನು ಅರ್ಪಿಸಿಕೊಂಡು ವಿವಿಧ ಸ್ಥಳಗಳಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಅವರ ನಂತರ ವಂ|ಫಾ| ತೋಮಸ್ ಸಿಕ್ವೇರಾ ಎಸ್.ವಿ.ಡಿ ರವರು 2015 ಜೂನ್ 04 ರಂದು ನಾಳದ ಧರ್ಮಗುರುಗಳಾಗಿ ನೇಮಕಗೊಂಡರು. ಧರ್ಮಕ್ಷೇತ್ರದ ಬಳಿಯಿದ್ದ ಸುಮಾರು 25 ವರ್ಷ ಹಳೆಯದಾಗಿದ್ದ ರಬ್ಬರ್ ಮರಗಳನ್ನು ಕಡಿದು, ಅಲ್ಲಿಯೇ ಅಡಿಕೆ ಗಿಡಗಳನ್ನು ನೆಟ್ಟರು. ಆಗಾಗ ಅದಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಜನರ ಜೊತೆಗೂಡಿ ಮಾಡಿಸಿಕೊಂಡರು. ಚರ್ಚ್ ತುಂಬಾ ಹಳೆಯದಾಗಿ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಚರ್ಚ್ ಅನ್ನು ನವೀಕರಣ ಮಾಡುವ ನಿರ್ಧಾರವನ್ನು ಸಮಸ್ತ ಬಾಂಧವರ ಒಪ್ಪಿಗೆಯ ಮೇರೆಗೆ ಕೈಗೊಂಡರು. 2018 ಜನವರಿ 14 ರಂದು ಚರ್ಚ್ ನವೀಕರಣದ ಸಲುವಾಗಿ ಅಡಿಗಲ್ಲನ್ನು ಅಂದು ಮಂಗಳೂರು ಧರ್ಮಕ್ಷೇತ್ರದ ಬಿಷಪರಾಗಿದ್ದ ಅತೀ ವಂದನೀಯ ಸ್ವಾಮಿ ಅಲೋಶಿಯಸ್ ಡಿ’ಸೋಜಾರವರು ಆಶೀರ್ವಾದಿಸಿ ಎಲ್ಲಾ ಕೆಲಸ ಕಾರ್ಯಗಳ ಮೇಲೆ ದೇವರ ಅನುಗ್ರಹವನ್ನು ಬೇಡಿದ್ದರು. ಅಂತೆಯೇ ಚರ್ಚ್ ನವೀಕರಣದ ಕಾರ್ಯವು ಎಲ್ಲಾ ಮಹಾದಾನಿಗಳ ಉದಾರ ಮನಸ್ಸಿನೊಂದಿಗೆ, ಕೆಲಸಗಾರರ ಹಾಗೂ ಚರ್ಚಿನ ಪ್ರಜೆಗಳ ಶ್ರಮದೊಂದಿಗೆ ಪೂರ್ಣಗೊಂಡು 2021 ಜನವರಿ 27ರಂದು ಲೋಕಾರ್ಪಣೆಗೊಳ್ಳುತ್ತಿದೆ.

Article written during Inauguration and Blessing of Renovated St Ann Church in January, 2021.
Source : stannchurchnala.com

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.