Media Release
Mangaluru , Feb 8 : Sandesha Foundation for Culture and Education is an educational institution which trains students at various levels in music, dance, art and painting. It also conducts courses in journalism, media education, public speaking and other similar courses. It organises workshops on drama, poetry and other related subjects. It brings together people of all walks of life.
‘Sandesha Award’ programme is an important event of Sandesha Foundation. It is to appreciate and recognize outstanding and value based contributions made by various personalities through Literature, Journalism, Arts, Education, Music, Media and Social Service.
This year’s award programme shall be held on Tuesday, February 22, 2022 at 5.30pm at Sandesha Institute ground. Most Rev. Dr. Henry D’Souza, the Bishop of Bellary and Chairman of the Institute shall preside over the function. Dr. P.Subrahmanya Yadapadithaya, Vice Chancellor of Mangalore University will be the Chief Guest. Mr. Shashi Kumar, IPS Commissioner of Police, Mangalore will be the Guest of Honour. Most Rev. Dr. Peter Paul Saldanha, Bishop of Mangalore and Most Rev. Dr. Gerald Isaac Lobo, the Bishop of Udupi, Fr. Francis Assisi Almeida, the Director of Sandesha, Rev. Fr. Ivan Pinto and Mr. Roy Castelino, the trustees of the Institute shall be the guests.
Fr Francis Assisi Almeida, Director, Sandesha Foundation detailed about this in a press conference today.
Sandesha Awardees 2021 :
Sandesha Literature Award (Kannada) –Mr. Baraguru Ramachandrappa
Sandesha Literature Award (Konkani) –Amar Konkani
Sandesha Literature Award (Tulu) – Dr. Sunitha Shetty
Sandesha Media Award – Mr Nagesh Hegde
Sandesha Konkani Music Award – Mrs Meena Rebimbus
Sandesha Art Award – Mr. Avithas Adalphus Cutinha (Dolla)
Sandesha Education Award – Mr. Lakshman Saab Chauri
Sandesha Special Award – Samarthanam Trust
Sandesha Awardees 2022 :
Sandesha Literature Award (Kannada) –Mr. Rahmath Tarikere
Sandesha Literature Award (Konkani) – Mr. Melvyn Rodrigues
Sandesha Literature Award (Tulu) – Mr. B.K. Gangadar Kirodian
Sandesha Media Award – Dr. T.C. Poornima
Sandesha Konkani Music Award – Mr. Alwyn Noronha
Sandesha Art Award – Mr. Kasaragod Chinna
Sandesha Education Award – Dr. P.K. Rajashekar
Sandesha Special Award – Mr. Sa. Raghunath
ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿಗಳು 2020-21 & 2021-22
ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ತನ್ನ ಹಲವಾರು ಚಟುವಟಿಕೆಗಳೊಂದಿಗೆ ಸಾಹಿತ್ಯ, ಶಿಕ್ಷಣ, ಮಾಧ್ಯಮ, ಕಲೆ, ಹಾಗೂ ಸಂಗೀತ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ವರ್ಷಂಪ್ರತಿ ಸಂದೇಶ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದೆ. ಇದೀಗ ಸಂದೇಶ ಪ್ರಶಸ್ತಿಗಳು 2021 ಹಾಗೂ 2022 ಕಾರ್ಯಕ್ರಮವು ದಿನಾಂಕ 22.02.2022 ರ ಮಂಗಳವಾರ ಸಂಜೆ 5.30 ಕ್ಕೆ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆಯಲಿರುವುದು. ಈ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಸಂದೇಶ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ| ವಂ| ಹೆನ್ರಿ ಡಿ’ಸೋಜ ಇವರು, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿರುವ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮುಖ್ಯ ಅತಿಥಿಗಳಾಗಿ ವಹಿಸಲಿದ್ದು, ಗೌರವ ಅತಿಥಿಗಳಾಗಿ ಶ್ರೀ ಶಶಿಕುಮಾರ್, ಐಪಿಎಸ್, ಪೋಲಿಸ್ ಆಯುಕ್ತರು, ಮಂಗಳೂರು ಹಾಗೂ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ| ವಂ| ಪೀಟರ್ ಪಾವ್ಲ್ ಸಲ್ಡಾನ್ಹ, ಉಡುಪಿ ಧರ್ಮಾಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ| ವಂ| ಜೆರಾಲ್ಡ್ ಐಸಾಕ್ ಲೋಬೊ, ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ವಂ| ಫಾ| ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಸಂದೇಶ ಪ್ರಶಸ್ತಿ ಅಯ್ಕೆ ಸಮಿತಿಯ ಅಧ್ಯಕ್ಷರಾದ ಡಾ| ವಲೇರಿಯನ್ ರೋಡ್ರಿಗಸ್, ಸಂದೇಶ ಪ್ರತಿಷ್ಠಾನದ ವಿಶ್ವಸ್ಥರಾದ ಶ್ರೀ ರೊಯ್ ಕ್ಯಾಸ್ತಲಿನೊ ಹಾಗೂ ವಂ| ಫಾ| ಐವನ್ ಪಿಂಟೊ ಇವರುಗಳು ಭಾಗವಹಿಸಲಿದ್ದಾರೆ.
ಸಂದೇಶ ಪ್ರಶಸ್ತಿಗಳು 2021ರ ಪುರಸ್ಕೃತರು :
ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ) - ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ ಇವರು 1946 ಅಕ್ಟೋಬರ್ 18 ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾದ್ಯಾಪಕರಾಗಿ ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮತ್ತು ಕರ್ನಾಟಕ ಪಠ್ಯ ಪುಸ್ತಕ ಸಮಾಜದ ಅಧ್ಯಕ್ಷರಾಗಿದ್ದರು.
ಬರಗೂರು ರಾಮಚಂದ್ರಪ್ಪರವರು ಹಲವಾರು ಕನ್ನಡ ಚಲನಚಿತ್ರಗಳಲ್ಲಿ ಕಥೆ ಹಾಗೂ ಸಂಭಾಷಣೆ ಬರಹಗಾರರಾಗಿ, ಸಾಹಿತಿ ಮತ್ತು ನಿರ್ದೇಶಕರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಇವರಿಗೆ ಪುಟ್ಟಣ್ಣ ಕಣಗಲ್ ಪ್ರಶಸ್ತಿ 2014 ರಲ್ಲಿ ದೊರಕಿದೆ. 13 ಚಲನಚಿತ್ರಗಳನ್ನು ಹೊರತುಪಡಿಸಿ ಅವರು ಹಲವಾರು ಸಾಕ್ಷ್ಯಾಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ) – ಅಮರ್ ಕೊಂಕಣಿ
ಅಮರ್ ಕೊಂಕಣಿ, ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ನಿರ್ಮಿಸಲಾದ ಪತ್ರಿಕೆ. ಈ ಪತ್ರಿಕೆಯು 6 ತಿಂಗಳಿಗೊಮ್ಮೆ ಪ್ರಕಟಗೊಳ್ಳುತ್ತದೆ ಹಾಗೂ ಈ ಪತ್ರಿಕೆಯಲ್ಲಿ ಸಂಶೋಧನಾ ಲೇಖನಗಳನ್ನು ಮಾತ್ರ ಪ್ರಕಟಪಡಿಸಲಾಗುತ್ತದೆ. ಅಮರ್ ಕೊಂಕಣಿ ಪತ್ರಿಕೆಯು 1981 ರಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಆಶ್ರಯದಲ್ಲಿ ಪ್ರಾರಂಭವಾಯಿತು. ಇದು ಜರ್ನಲ್ ನೇಮಕ ಮತ್ತು ತಡೆರಹಿತ ಪ್ರಕಾಶನ ದಾಖಲೆಯನ್ನು ಹೊಂದಿದೆ ಮತ್ತು ಇದುವರೆಗೆ 76 ಸಂಚಿಕೆಗಳನ್ನು ಹೊರತಂದಿದೆ. ಈ ಪ್ರತಿಯೊಂದು ಸಂಚಿಕೆಗಳು ಉತ್ತಮ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಒಳಗೊಂಡಿದ್ದು, ಕೊಂಕಣಿ ಸಾರ್ವಜನಿಕರನ್ನು ರೂಪಿಸುವಲ್ಲಿ ಜರ್ನಲ್ ನ ಸಂಶೋಧನಾ ಫಲಿತಾಂಶವು ಪ್ರಮುಖ ಪಾತ್ರವನ್ನು ವಹಿಸಿದೆ. ಜರ್ನಲ್ ಅನ್ನು ಕನ್ನಡ ಮತ್ತು ದೇವಾನಾಗರಿ ಲಿಪಿಯಲ್ಲಿ ಪ್ರಕಟಿಸಲಾಗಿದೆ. ಇದರ ಪ್ರಸ್ತುತ ಸಂಪಾದಕರು ಫಾ. ಡಾ. ಮೆಲ್ವಿನ್ ಪಿಂಟೊ ಎಸ್. ಜೆ.
ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು) – ಡಾ. ಸುನಿತಾ ಎಂ ಶೆಟ್ಟಿ
ಡಾ. ಸುನೀತಾ ಎಂ ಶೆಟ್ಟಿ ಇವರು 1932 ರಲ್ಲಿ ಮಂಗಳೂರಿನ ಕಳವಾರದಲ್ಲಿ ಜನಿಸಿದರು. ಇವರು ಮುಂಬೈ ಗುರು ನಾನಕ ಖಾಲ್ಸಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ತುಳು ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರಿಗೆ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ರಾಣಿ ಅಬ್ಬಕ್ಕ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮುಂತಾದವುಗಳು ದೊರಕಿವೆ.
ಸಂದೇಶ ಮಾಧ್ಯಮ ಪ್ರಶಸ್ತಿ – ನಾಗೇಶ ಹೆಗಡೆ
ನಾಗೇಶ ಹೆಗಡೆ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಕ್ಕೆಮನೆಯಲ್ಲಿ ಫೆಬ್ರವರಿ 14, 1948 ರಲ್ಲಿ ಜನಿಸಿದರು. ಇವರು ನೈನಿತಾಲ್ ವಿಶ್ವವಿದ್ಯಾಲಯದಲ್ಲಿ ಪರಿಸರ ಭೂವಿಜ್ನಾನದ ಸಹಾಯಕ ಪ್ರಾಧ್ಯಪಕರಾಗಿದ್ದರು. ಹಾಗೂ ಪ್ರಜಾವಾಣಿ ಮತ್ತು ಸುಧಾದಲ್ಲಿ ವಿವಿಧ ಹುದ್ದೆ ನಿರ್ವಹಿಸಿ ಸಹಾಯಕ ಸಂಪಾದಕರಾಗಿ 26 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಗೌರವ ಸಾಹಿತ್ಯ’ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಗೌರವ ಸನ್ಮಾನ, ಪತ್ರಿಕೋದ್ಯಮ ಸರ್ವೋನ್ನತ ‘ಟಿಎಸ್‍ಆರ್ ಪ್ರಶಸ್ತಿ’ ಹಾಗೂ ಇನ್ನಿತರ ಪ್ರಶಸ್ತಿಗಳು ದೊರಕಿವೆ.
ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ – ಮೀನ ರೆಬಿಂಬಸ್
ಮೀನ ರೆಬಿಂಬಸ್ ಇವರು 1946 ರ ನವೆಂಬರ್ 21 ರಂದು ಮಂಗಳೂರಿನ ಜೆಪ್ಪುವಿನಲ್ಲಿ ಜನಿಸಿದರು. 1963 ರಲ್ಲಿ ಮೊದಲ ಬಾರಿಗೆ ವಿಲ್ಫಿ ರೆಬಿಂಬಸ್ ಅವರ ಸಂಗೀತ ಪಾರ್ಟಿ ‘ಯುನೈಟೆಡ್ ಯಂಗ್‍ಸ್ಟಾರ್ಸ್’ ನಲ್ಲಿ ಹಾಡುವ ಅವಕಾಶವನ್ನು ಪಡೆದರು. ಇವರು 1971 ರಿಂದ ‘ವಿಲ್ಫಿ ನೈಟ್ಸ್’ ಯುಗವನ್ನು ಪ್ರಾರಂಭಿಸಿದರು ಮತ್ತು ಇಲ್ಲಿಯವರೆಗೆ ಅವರು 245 ವಿಲ್ಫಿ ನೈಟ್ಸ್‍ಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮೀನ ಅವರ ಹಾಡುಗಳನ್ನು ಹೆಚ್‍ಎಂವಿ ನಿರ್ಮಿಸಿದ 3 ಡಿಸ್ಕ್‍ಗಳಿಗೆ ಆಯ್ಕೆ ಮಾಡಲಾಗಿದೆ ಹಾಗೂ ಬೆಂಗಳೂರು ಮತ್ತು ದೆಹಲಿ ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿದೆ. ಆಕೆ ಮಂಗಳೂರಿನ ಆಕಾಶವಾಣಿ ಆಡಿಷನ್ ಕಲಾವಿದೆಯೂ ಹೌದು.
ಮೀನ 2000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು 300ಕ್ಕೂ ಹೆಚ್ಚು ನಾಟಕಗಳಿಗೆ ಹಿನ್ನಲೆ ಗಾಯಕಿಯಾಗಿ ಅಭಿನಯಿಸಿದ್ದಾರೆ. ವಿಲ್ಫಿಯವರ 46 ಧ್ವನಿ ಮುದ್ರಿಕೆಗಳಿಗೆ (ಸಿಡಿ) ಹಾಗೂ 6 ಭಕ್ತಿಗೀತೆಗಳಿಗೆ ಧ್ವನಿ ನೀಡಿದ್ದಾರೆ.
ಸಂದೇಶ ಕಲಾ ಪ್ರಶಸ್ತಿ- ಅವಿತಾಸ್ ಎಡೊಲ್ಫಸ್ ಕುಟಿನ್ಹಾ (ಡೊಲ್ಲಾ)
ಅವಿತಾಸ್ ಎಡೊಲ್ಫಸ್ ಕುಟಿನ್ಹಾ ಇವರು 1946, ಜೂನ್ 17 ರಂದು ಜನಿಸಿದರು. ಇವರ ಜನ್ಮತಃ ಹೆಸರು ಅವಿತಾಸ್ ಎಡೊಲ್ಫಸ್ ಕುಟಿನ್ಹಾ ಆದರೆ ಕೊಂಕಣಿ ಸಮಾಜವು ಇವರನ್ನು “ಡೊಲ್ಲಾ” ಎಂಬ ಹೆಸರಿನಿಂದ ಕರೆಯುತ್ತದೆ. ಹಾಸ್ಯ-ಮನೋರಂಜನೆಯ ಪರ್ಯಾಯವೆಂಬಂತೆ ಡೊಲ್ಲಾ ಎಂಬ ಹೆಸರು ಕೊಂಕಣಿ ಸಮಾಜದಲ್ಲಿ ಹೆಸರುವಾಸಿಯಾಗಿದೆ. ಇವರು 5 ವರ್ಷ ಪ್ರಾಯದವರಿದ್ದಾಗ ತಮಿಳುನಾಡಿನಲ್ಲಿ ಮೊದಲ ಬಾರಿಗೆ ನಾಟಕವೊಂದರಲ್ಲಿ ನಟನೆ ಮಾಡಿದ್ದರು. ಶ್ರೀ ಗಿರಿಯವರ ಹಲವಾರು ನಾಟಕಗಳಲ್ಲಿ ನಟಿಸುವ ಅವಕಾಶ ಇವರಿಗೆ ದೊರಕಿದೆ. ಜನಾಬ್ ಇಬ್ರಾಹಿಮ್‍ರವರ ‘ಕಲ್ಜಿಗದ ಮದ್ಮಲ್’ ಇವರು ನಟಿಸಿದ ಮೊದಲ ತುಳು ನಾಟಕ (1960). ಒಂದು ಕಾಲದಲ್ಲಿ ‘ವಿಲ್ಫಿ ನೈಟ್’ ಕಾರ್ಯಕ್ರಮಗಳಲ್ಲಿ ಕಾರ್ಯ ನಿರ್ವಹಣೆ ಮಾಡುವವರೇ ಹಾಸ್ಯ ಪ್ರದರ್ಶನ ಮಾಡುತ್ತಿದ್ದರು. ಇದರ ನಂತರ ಹಾಸ್ಯ ಕಲೆಯ ಪ್ರದರ್ಶನ ಇವರಿಗೆ ದೊರಕಿತು. ತದ ನಂತರ ಇವರ ‘ಡೊಲ್-ಫೆಲ್-ಚಲ್’ ತಂಡದ ಪ್ರಾರಂಭವಾಯಿತು. ಇವರು ಕನ್ನಡ ಸಿನೇಮಾಗಳಲ್ಲಿ ಮಾತ್ರವಲ್ಲದೆ ಕನ್ನಡ ಹಾಗೂ ತುಳು ಧಾರವಾಹಿಗಳಲ್ಲಿಯೂ ನಟಿಸಿರುತ್ತಾರೆ. ಡೊಲ್ಲಾ ಇವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ 2006ರಲ್ಲಿ ಗೌರವ ಕಲಾ ಪ್ರಶಸ್ತಿ ದೊರಕಿದೆ ಹಾಗೂ ನಾಟಕ ರಂಗಕ್ಕೆ ಇವರು ಮಾಡಿದ ಸೇವೆಯನ್ನು ಗುರುತಿಸಿಕೊನ್ಕ್ಯಾಬ್ ಸಂಸ್ಥೆಯವರು 1998ರಲ್ಲಿ ಇವರಿಗೆ ‘ಹಾಸ್ಯ್ ರಾಯ್’ ಎಂಬ ಬಿರುದು ಕೊಟ್ಟಿದ್ದಾರೆ. ಹಾಗೂ ಇನ್ನಿತರ ಬಿರುದು ಹಾಗೂ ಬಹುಮಾನಗಳನ್ನು ಪಡೆದಿರುತ್ತಾರೆ.
ಸಂದೇಶ ಶಿಕ್ಷಣ ಪ್ರಶಸ್ತಿ- ಡಾ. ಲಕ್ಷಣ್ ಸಾಬ್ ಚೌರಿ
ಡಾ. ಲಕ್ಷಣ್ ಸಾಬ್ ಚೌರಿ ಇವರು 1964 ರ ಅಗಸ್ಟ್ 8 ರಂದು ಅಡಿಹುಡಿ ಊರಿನ ಬಾಗಲಕೋಟೆ ಜಿಲ್ಲೆಯಲ್ಲಿ ಜನಿಸಿದರು. ಇವರು ಅಜಿತ್ ಬಾನೆ ಪ್ರೌಢ ಶಾಲೆಯಲ್ಲಿ ಮುಖ್ಯಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮಕ್ಕಳ ಸಾಹಿತಿಯಾಗಿರುತ್ತಾರೆ. ಇವರು ಬಿಡುವಿನಲ್ಲಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಿಗೆ ಹೋಗಿ ಮಕ್ಕಳಲ್ಲಿ ಸಾಹಿತ್ಯಭಿರುಚಿ ಹುಟ್ಟಿಸಿ, ಮಾನವೀಯ ಮೌಲ್ಯ ಸಾರುತ್ತಾರೆ. ಡಾ. ಲಕ್ಷಣ್ ಸಾಬ್ ಚೌರಿ ಇವರು ತಿಂಗಳಿಗೆ 2 ಬಾರಿ ದನಗಾಹಿ, ಕುರಿಗಾಹಿ ಮಕ್ಕಳನ್ನು ಬಯಲಲ್ಲಿ ಒಟ್ಟು ಸೇರಿಸಿ, ತಿಂಡಿ ಕೊಟ್ಟು, ಕತೆ ಹೇಳಿ, ಹಾಡು ಹೇಳಿ ಅವರಲ್ಲೂ ವಿದ್ಯೆ ಕಲಿಯುವ ಆಸಕ್ತಿ ಹುಟ್ಟಿಸಿ, ವಿದ್ಯೆ ಕಲಿಯುವಂತೆ ಆಸಕ್ತಿ ಹುಟ್ಟಿಸುವುದೇ ಇವರ ವಿಶೆಷ್ಟ ವ್ಯಕ್ತಿತ್ವ.
ಸಂದೇಶ ವಿಶೇಷ ಪ್ರಶಸ್ತಿ- ಸಮರ್ಥನಂ ಟ್ರಸ್ಟ್
ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ಅನ್ನು 1997 ರಲ್ಲಿ ಮಹಾಂತೇಶ್ ಜಿ ಕಿವಡಸನ್ನವರ್ ಅವರು ತಮ್ಮ ಶಾಲಾ ಸಹಪಾಠಿ ಮತ್ತು ಬಾಲ್ಯದ ಸ್ನೇಹಿತ ದಿ. ನಾಗೇಶ್ ಎಸ್.ಪಿ ಅವರೊಂದಿಗೆ ಸ್ಥಾಪಿಸಿದರು. ಸಂಸ್ಥಾಪಕರು, ದೃಷ್ಟಿ ವಿಕಲಚೇತನರು, ಹಿಂದುಳಿದವರು ಸೇರಿದಂತೆ ವಿಕಲಾಂಗರನ್ನು ಪೂರೈಸುವ ಸಮರ್ಥನಂ ಸಂಸ್ಥೆಯನ್ನು ಒಟ್ಟಾಗಿ ಪರಿಕಲ್ಪನೆ ಮಾಡಿದ್ದಾರೆ. ಸ್ಥಿತಿ ಮತ್ತು ಅಂಗವೈಕಲ್ಯವನ್ನು ಲೆಕ್ಕಿಸದೆ ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ ಆದ್ದರಿಂದ ಅವರು ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಹಂತಗಳಲ್ಲಿ ವಿವಿಧ ಕಾರ್ಯಕ್ರಮಗಳ ಅಭಿವೃದ್ಧಿಯನ್ನು ಪ್ರಾರಂಭಿಸಿದರು. ಮತ್ತು ದೃಷ್ಟಿಹೀನರು ಹಾಗೂ ಹಿಂದುಳಿದವರಿಗೆ ಮಾತ್ರ ಮೀಸಲಾದ ವಿವಿಧ ಉಪಕ್ರಮಗಳನ್ನು ಪ್ರಾರಂಭಿಸಿದರು. ಈ ಸಂಸ್ಥೆಯು ನೂರಾರು ವಿಕಲಚೇತನರನ್ನು , ಹಿಂದುಳಿದವರು ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸೇವೆಗಳನ್ನು ನೀಡುತ್ತಿದೆ. ಇವರಿಗೆ 2002 ರಲ್ಲಿ ಕರ್ನಾಟಕ ಸರ್ಕಾರದಿಂದ ಶ್ರೇಷ್ಠತೆಗಾಗಿ ರಾಜ್ಯಪಾಲರ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿಗಳು ದೊರಕಿದೆ.
ಸಂದೇಶ ಪ್ರಶಸ್ತಿಗಳು 2022ರ ಪುರಸ್ಕೃತರು :
ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ) - ರಹ್ಮತ್ ತರೀಕೆರೆ
ತರೀಕೆರೆಯ ಸಮತಳ ಗ್ರಾಮದಲ್ಲಿ 1959ರಲ್ಲಿ ಜನಿಸಿದ ರಹಮತ್ ತರೀಕೆರೆಯವರು ಶೈಕ್ಷಣಿಕವಾಗಿ ಅದ್ವಿತೀಯ ಸಾಧನೆ ಗೈದವರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿಯೂ ವಿಶಿಷ್ಟ ಬರವಣಿಗೆಯ ಹರಿಕಾರರಾಗಿಯೂ ಪ್ರಸಿದ್ಧಿಗಳಿಸಿದವರು. ಕನ್ನಡದ ಪ್ರಮುಖ ಪತ್ರಿಕೆಗಳ ಅಂಕಣಕಾರರಾಗಿಯೂ ಅವರು ನಿರಂತರ ದುಡಿಮೆಗೈದಿದ್ದಾರೆ. ಯಾವ ವಲಯದಲ್ಲಿ ಹೆಚ್ಚು ಸಂಶೋಧನೆ ನಡೆದಿಲ್ಲವೋ ಅಂತಹ ವಲಯದಲ್ಲಿ ಕೆಲಸಮಾಡುವ ಪ್ರಕೃತಿ ಅವರದು.
ಸೂಕ್ಷ್ಮ ಒಳನೋಟಗಳಿಗೆ ಹಾಗೂ ಪ್ರಖರ ಚಿಂತನೆಗೆ ಹೆಸರಾದ ತರೀಕೆರೆಯವರು ಮೂವತ್ತಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಪ್ರತಿಕೃತಿಯಲ್ಲೂ ಒಂದಲ್ಲ ಒಂದು ಬಗೆಯ ಮೌಲ್ಯವನ್ನು ಪ್ರತಿಪಾದಿಸುತ್ತ ಬಂದವರು. ಅವರು ಪ್ರಕಟಿಸಿದ ಮೊದಲ ಲೇಖನಗಳ ಸಂಕಲನವಾದ ʻಪ್ರತಿ ಸಂಸ್ಕೃತಿʼ, ಕರ್ನಾಟಕದ ಸೂಫಿಗಳು, ಅಂಡಮಾನ್ ಕನಸು ಎಂಬ ಮೂರು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಕರ್ನಾಟಕದ ನಾಥಪಂಥ, ತತ್ವಪದ ಪ್ರವೇಶಿಕೆ, ರಾಜಧರ್ಮ, ಸಂಶೋಧನ ಮೀಮಾಂಸೆ ಮೊದಲಾದ ಸಂಶೋಧನಾತ್ಮಕ ಕೃತಿಗಳು ಅವರ ಬರವಣಿಗೆಯ ಸೂಕ್ಷ್ಮತೆಗೆ ನಿದರ್ಶನಗಳು.
ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ) – ಮೆಲ್ವಿನ್ ರೋಡ್ರಿಗಸ್
ಮಂಗಳೂರಿನ ದೇರೆಬೈಲಿನಲ್ಲಿ 1962ರಲ್ಲಿ ಶ್ರೀಯುತ ಚಾರ್ಲ್ಸ್ ಹಾಗೂ ಥೆರೇಸಾ ರಾಡ್ರಿಗಸ್ ಅವರ ಪುತ್ರರಾಗಿ ಜನಿಸಿದ ಮೆಲ್ವಿನ್ ರಾಡ್ರಿಗಸ್ ಅವರು ತಮ್ಮ ಸ್ನಾತಕೋತ್ತರ ವಿದ್ಯಾಭ್ಯಾಸದ ಬಳಿಕ ಬಹುಕಾಲ ದುಬಾಯಿಯಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿದ್ದಾಗಲೇ ಕೊಂಕಣಿ ಬರಹಗಾರರ ಫಾರಮ್ಮನ್ನು ಸ್ಥಾಪನೆ ಮಾಡಿದರು.
ಕವಿಯಾಗಿ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ನೆಲೆಕಂಡುಕೊಂಡಿರುವ ಮೆಲ್ವಿನ್ ರಾಡ್ರಿಗಸ್ ಅವರು ಆರು ಕೊಂಕಣಿ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ಪ್ರಸಿದ್ಧ ಕವಿಗಳಾದ ಚೆನ್ನ ವೀರ ಕಣವಿಯವರ ʻಜೀವಧ್ವನಿʼಹಾಗೂ ಕೆ. ಎಸ್ ನರಸಿಂಹ ಸ್ವಾಮಿಯವರʻ ತೆರೆದಬಾಗಿಲುʼ ಕೃತಿಗಳನ್ನು ಸಾಹಿತ್ಯ ಅಕಾಡೆಮಿಗಾಗಿ ಕೊಂಕಣಿಗೆ ಅನುವಾದಿಸಿದ್ದಾರೆ. ಹಲವು ಕೊಂಕಣಿ ಪ್ರಬಂಧ ಸಂಕಲನ, ಕವನ ಸಂಕಲನ, ಕಥಾ ಸಂಕಲನಗಳನ್ನು ಸಂಪಾದಿಸಿದ್ದಾರೆ.
ಕೊಂಕಣಿ ಕವನಗಳನ್ನು ಜನಪ್ರಿಯಗೊಳಿಸಲೆಂದು ಕವಿತಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅನೇಕ ಬಗೆಯ ಸ್ಪೃಧೆಗಳನ್ನು ಏರ್ಪಡಿಸಿ ಜನರಲ್ಲಿ ಆಸಕ್ತಿಕುದುರುವಂತೆ ನೋಡಿಕೊಂಡಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಕೊಂಕಣಿ ಕವನ ರಚನಾ ಸ್ಫರ್ಧೆ, ಗಾಯನ ಸ್ಪರ್ಧೆ ಇತ್ಯಾದಿಗಳನ್ನು ಏರ್ಪಡಿಸಿ ನಿರಂತರ ಕೊಂಕಣಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಜಾಗೇಕವಿ, ಮಾಂಡ್ ಸೋಬಾಣ ಸಂಸ್ಥೆಗಳಲ್ಲೂ ಶ್ರೀಯುತರ ಕೊಡುಗೆಯನ್ನು ಸ್ಮರಿಸಬಹುದು. ಗೋವಾದಲ್ಲಿ ನಡೆದ 24ನೆಯ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಶ್ರೀಯುತ ಮೆಲ್ವಿನ್ ವಹಿಸಿದ್ದರು. ಅವರ ʻಪ್ರಕೃತಿ ಚೊಪಾಸ್ʼಕವನ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವಿಶ್ವ ಕೊಂಕಣಿ ಕವಿತಾ ಪ್ರಶಸ್ತಿ, ದೈಜೀ ದುಬಾಯಿ ಪ್ರಶಸ್ತಿ- ಹೀಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು) – ಬಿ.ಕೆ. ಗಂಗಾಧರ್ ಕಿರೋಡಿಯನ್
ಮಂಗಳೂರಿನ ಕದ್ರಿ ಕಂಬ್ಳದಲ್ಲಿ ನೆಲೆಸಿರುವ ಧಿ. ಐತಪ್ಪ ಹಾಗೂ ಸೀತಮ್ಮನವರ ಪುತ್ರರಾದ ಗಂಗಾಧರ ಕಿರೋಡಿಯನ್ ಅವರು ತುಳು ನಾಟಕಗಳ ಗೀತ ರಚನೆಕಾರರಾಗಿ ನಾಟಕ ಲೋಕಕ್ಕೆ ಪ್ರವೇಶಿಸಿದರು. ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ಪೊರ್ಲುಆರ್ಟ್ಸ್ ಕುಡ್ಲ ಎಂಬ ಸಂಸ್ಥೆಯನ್ನು ಸ್ಥಾಪಿಸಿ ರಂಗಭೂಮಿಗೆ ಬೇಕಾದ ಸಕಲ ವೇಷಭೂಷಣ, ರಂಗ ವಿನ್ಯಾಸ ಮುಂತಾದ ಎಲ್ಲ ಪರಿಕರಗಳನ್ನು ನೀಡ ತೊಡಗಿದರು. ಮುಂದೆ ನಾಟಕ ಸಾಹಿತ್ಯ ಅವರ ಕೈಹಿಡಿಯಿತು.
ತುಳುವಿನಲ್ಲಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳ ವಿಪುಲ ಬೆಳೆಯನ್ನೇ ತೆಗೆದ ಕಿರೋಡಿಯನ್ನರು ನಾಟಕ ನಿರ್ದೇಶನವನ್ನು ಮಾಡುವಲ್ಲಿಯೂ ಯಶಸ್ವಿಯಾದರು. ನೇಮೊದ ಬೂಲ್ಯ, ಪೊದ್ದನ ಬಿರ್ಸಾತಿಗೆ, ಬಂಗಾರ್ದ ಬಿಸತ್ತಿ, ನಲ್ಕೆ ನಾಗವಲ್ಲಿ ಮುಂತಾದ ಹಲವು ನಾಟಕಗಳು ಅವರಿಗೆ ಜನಪದ್ರಿಯತೆಯನ್ನು ತಂದುಕೊಟ್ಟವು.
ಧರ್ಮ ಇತ್ತಿಮಣ್ಣ್, ಕಾರ್ನಿಕೊದ ಕೋರ್ದಬ್ಬು ಎಂಬ ತುಳು ಧಾರಾವಾಹಿಗೆ ಕತೆ ಚಿತ್ರಕತೆಗಳನ್ನು ರಚಿಸಿ ಯಶಸ್ಸು ಪಡೆದ ಕಿರೋಡಿಯನ್ನರು ನೇಮೊದ ಬೂಳ್ಯ, ಪಂಡಿ ಪಣವು, ಕಾರ್ನಿಕೊದ ಕಲ್ಲುರ್ಟಿ ಕಲ್ಕುಡೆ ಮುಂತಾದ ತುಳುಚಲನ ಚಿತ್ರಗಳಿಗೆ ಕತೆ, ಚಿತ್ರಕತೆ, ಸಂಭಾಷಣೆಗಳನ್ನೂ ಬರೆದು ತಮ್ಮಸಾಹಿತ್ಯ ಲೋಕವನ್ನು ವಿಸ್ತರಿಸಿಕೊಂಡರು. ತುಳು ರಂಗಭೂಮಿಗೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ ಸಂಸ್ಥೆಗಳು ಅವರನ್ನು ಪ್ರಶಸ್ತಿ ನೀಡಿ ಗೌರವಿಸಿದೆ.
ಸಂದೇಶ ಮಾಧ್ಯಮ ಪ್ರಶಸ್ತಿ – ಡಾ. ಟಿ.ಸಿ. ಪೂರ್ಣಿಮಾ
ತಿರುಮಕೂಡ್ಲು ಚಿಕ್ಕರಾಜ್ ಹಾಗೂ ಮಾಯಾ ಅವರ ಪುತ್ರಿ ಡಾ.ಟಿ.ಸಿ. ಪೂರ್ಣಿಮಾ ಅವರು ಪ್ರಸಿದ್ಧ ಪಿಟೀಲು ದಿಗ್ಗಜ ಚೌಡಯ್ಯನವರ ಮೊಮ್ಮಗಳೂ ಹೌದು. ಭಾರತೀಯ ಸಮಾಚಾರ ಸೇವೆಯ ವಿವಿಧ ಮಜಲುಗಳಲ್ಲಿ ಮೂರೂವರೆ ದಶಕಗಳ ಸೇವೆಸಲ್ಲಿಸಿದ್ದಾರೆ. ಮಾಧ್ಯಮ ಕ್ಷೇತ್ರದ ಎಲ್ಲ ವಿಭಾಗಗಳಲ್ಲೂ ತೊಡಗಿಸಿಕೊಂಡ ಶ್ರೇಯಸ್ಸುಅವರದು.
ಭಾರತ ಸರಕಾರದ ಕೇಂದ್ರ ಸಮಾಚಾರ ಸೇವೆಗೆ ಕರ್ನಾಟಕದ ಮೊದಲ ಮಹಿಳಾ ಅಧಿಕಾರಿಯಾಗಿ ಸೇರ್ಪಡೆಗೊಂಡ ಹೆಗ್ಗಳಿಕೆ ಅವರದು. ಸರಕಾರದ ಅಧಿಕೃತ ದೂರದರ್ಶನ ವಾಹಿನಿಯಲ್ಲಿ ಮೊದಲ ಮಹಿಳಾ ಸುದ್ದಿಸಂಪಾದಕರಾಗಿಯೂ ಅವರು ಸೇವೆ ಗೈದಿದ್ದಾರೆ. ಸರ್ಕಾರದ ಮೂರು ಮುಖ್ಯ ಮಂತ್ರಿಗಳಿಗೆ ವಿಶೇಷ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸಿದ ಅನುಭವ ಅವರ ಪಾಲಿಗೆ ಸಂದಿದೆ.
ಕನ್ನಡ ರೇಡಿಯೋ ಕ್ಷೇತ್ರದಲ್ಲಿ ಪ್ರಾದೇಶಿಕ ಸುದ್ದಿ ವಿಭಾಗದ ಮುಖ್ಯಸ್ಥರಾಗಿಯೂ ಅವರು ಕರ್ತವ್ಯನಿಭಾಯಿಸಿದ್ದಾರೆ. ಅತ್ಯುತ್ತಮ ಸುದ್ದಿ ಸಂಪಾದಕರಿಗಿರುವ ರಾಷ್ಟಮಟ್ಟದ ಪ್ರಶಸ್ತಿಯನ್ನು ಡಾ. ಪೂರ್ಣಿಮಾ ಅವರು ಪಡೆದಿದ್ದಾರೆ. ಅವರು ನಿರ್ಮಿಸಿದ ಸುದ್ದಿಯೇ ತರ ಸೃಜನ ಶೀಲ ಕಾರ್ಯಕ್ರಮಕ್ಕೆ ಪ್ರತಿಷ್ಠಿತ ʻಗಾಂಧಿಯನ್ ಫಿಲಾಸಫಿ ಪ್ರಶಸ್ತಿʼ ಕೂಡ ಅವರಿಗೆ ಸಂದಾಯವಾಗಿದೆ.
ಮಾಧ್ಯಮ ಕ್ಷೇತ್ರದಂತೆಯೇ ಸಾಹಿತ್ಯ ಕ್ಷೇತ್ರದಲ್ಲಿಯು ಅವರ ದುಡಿಮೆ ಅನನ್ಯವಾದುದು. ಇಪ್ಪತ್ತೈದಕ್ಕೂ ಅಧಿಕಕೃತಿಗಳು ಅವರ ಲೇಖನಿಯಿಂದ ಮೂಡಿಬಂದಿದೆ.
ಎರಡು ರಾಷ್ಟ್ರಮಟ್ಟದ ಪ್ರಶಸ್ತಿಗಳಲ್ಲದೆ, ಪ್ರೊ. ವಿ.ಎಂ. ಇನಾಂದಾರ್ ಪ್ರಶಸ್ತಿ, ಡಾ. ಶಿವರಾಮ ಕಾರಂತ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳೂ ಅವರಿಗೆ ಸಂದಿವೆ.
ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ – ಆಲ್ವಿನ್ ನೊರೊನ್ಹ
ಬಜ್ಪೆಯ ಸೈಂಟ್ ಜೋಸೆಫರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಆಲ್ವಿನ್ ನೊರೋನ್ಹಾ ಅವರು ಪ್ರವೃತ್ತಿಯಲ್ಲಿ ಸಂಗೀತಗಾರರು. ಕೊಂಕಣಿ ಸಂಗೀತದ ಹಾಡುಗಾರರಾಗಿಯೂ ಗೀತರಚನೆಕಾರರಾಗಿಯೂ ಅಪಾರ ಸಾಧನೆಗೈದವರು. ʻಭೊಗ್ತಿಪೊಣಿʼಎಂಬ ಭಕ್ತಿಗೀತೆಯ ಆಲ್ಬಮಿನ ಗೀತ ರಚನೆ, ಸಂಗೀತ ನಿರ್ದೇಶನ, ಹಿನ್ನೆಲೆ ಸಂಗೀತ- ಹೀಗೆ ಪ್ರತಿಯೊಂದರಲ್ಲೂ ತಮ್ಮ ಮುದ್ರೆಯೊತ್ತಿರುವ ಅವರು ಕೊಂಕಣಿ ಸಂಗೀತಕ್ಕೆ ಸಂಬಂಧಪಟ್ಟ ಹಾಗೆ ಓರ್ವ ಸವ್ಯಸಾಚಿ. ʻಬಂಗ್ರಮಣಿʼ ಕೂಡ ಅವರ ಅಂತಹದೇ ಯಶಸ್ವೀ ಪ್ರಯೋಗ.
ಆಲ್ವಿನ್ ನೈಟ್ಸ್ ಎಂಬ ಹೆಸರಿನಲ್ಲಿ ಅವರು ಹಲವಾರು ಕಾರ್ಯಕ್ರಮಗಳನ್ನು ನೀಡಿ ಪ್ರಸಿದ್ಧಿ ಪಡೆದಿದ್ದಾರೆ. ಬಜ್ಪೆಯ ಸೈಂಟ್ ಜೋಸೆಫರ ಪ್ಯಾರಿಶ್ನಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕೊಯರ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಮೂರು ಬಾರಿ ತಮ್ಮ ಪ್ಯಾರಿಶ್ ಸಮಗ್ರ ಚಾಂಪಿಯನ್ ಆಗಿ ಹೊಮ್ಮುವುದಕ್ಕೆ ಶ್ರೀಯುತರು ಕಾರಣಕರ್ತರಾಗಿದ್ದಾರೆ. ಹಲವಾರು ಆಲ್ಬಮ್ಗಳನ್ನು ಅವರು ಸಿದ್ಧಪಡಿಸಿದ್ದಾರೆ. ಅದೆಷ್ಟೋ ಆಲ್ಬಮ್ಗಳಿಗೆ ಹಾಡಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ನಡೆದ ಹಲವಾರು ಕೊಂಕಣಿ ಗಾಯನ ಸ್ಫರ್ಧೆಗಳಲ್ಲಿ ತೀರ್ಪುಗಾರರಾಗಿ ಸಹಕರಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿಯೂ ತೀರ್ಪುಗಾರರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ದೋಹ, ಕುವೈಟ್ ಹಾಗೂ ಮಂಗಳೂರಿನಲ್ಲಿ ಕೊಂಕಣಿ ಗೀತ ಗಾಯನ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ.
ಸಂದೇಶ ಕಲಾ ಪ್ರಶಸ್ತಿ- ಕಾಸರಗೋಡ್ ಚಿನ್ನ
ಸುಜೀರ್ ಶ್ರೀನಿವಾಸ ರಾವ್ ಯಾನೆ ಕಾಸರಗೋಡು ಚಿನ್ನಾ ಗಡಿನಾಡಾದ ಕಾಸರಗೋಡಿನಲ್ಲಿ 1957ರಲ್ಲಿ ಜನಿಸಿದರು. ವೃತ್ತಿಯಲ್ಲಿ ವ್ಯಾಪಾರಿಯಾದರೂ ಇತರ ಕಲಾತ್ಮಕ ಹವ್ಯಾಸಗಳನ್ನು ರೂಢಿಸಿಕೊಂಡು ಕನ್ನಡದ ಕೀರ್ತಿಪತಾಕೆಯನ್ನು ಕೇರಳದಲ್ಲೂ ಮೊಳಗಿಸಿದವರು. ಬೆಂಗಳೂರಿನ ಆದರ್ಶ ಫಿಲ್ಮ್ ಸಂಸ್ಥೆಯಿಂದ ಪದವಿ ಪಡೆದು ಕೆಲಕಾಲ ಸಿನಿಮಾ ನಟನಾಗಿ ದುಡಿದು ಮುಂದೆ ಅಪ್ಪಿಕೊಂಡದ್ದು ರಂಗಭೂಮಿಯನ್ನು. ಸಂಗೀತ ರಥ, ಯಕ್ಷ ತೇರು, ವಠಾರ ನಾಟಕ, ಲಾರಿ ನಾಟಕ ಮುಂತಾದ ಊಹೆಗೂ ನಿಲುಕದ ಕಲಾ ಪ್ರಕಾರಗಳನ್ನು ಆಗುಮಾಡಿದ ವ್ಯಕ್ತಿತ್ವ ಕಾಸರಗೋಡು ಚಿನ್ನಾ ಅವರದು. ಸಂಘಟನೆಯಲ್ಲಿ ಅವರದು ಅಪಾರ ಸಾಧನೆ. ಹಿಡಿದ ಕೆಲಸವನ್ನು ತುದಿ ಮುಟ್ಟಿಸುವ ಕಾಯಕಯೋಗಿ. ಸಂಗೀತೋತ್ಸವ, ಸಾಹಿತ್ಯೋತ್ಸವ, ರಂಗೋತ್ಸವಗಳು ಹಲವಾರು ಬಾರಿ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿವೆ. ಆಯೋಜನೆಗೊಳ್ಳುತ್ತಲೇ ಇವೆ. ವಿದ್ಯಾರ್ಥಿ ದೆಸೆಯಲ್ಲಿ ಕಲ್ಲಿಕೋಟೆ ವಿಶ್ವವಿದ್ಯಾಲಯ ಮಟ್ಟದ ಶ್ರೇಷ್ಠ ನಟ ಪ್ರಶಸ್ತಿ, ಬಳಿಕ ಕರ್ನಾಟಕ ರಾಜದ್ಯಮಟ್ಟದ ಅತ್ಯುತ್ತಮ ನಟ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ರಂಗಭೂಮಿಯ ವಿಸ್ತಾರಕ್ಕಾಗಿ ಶ್ರಮಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕೊಂಕಣಿ ಸಮಾಜವನ್ನು ಕಟ್ಟುವ ಕಾಯಕ ಮಾಡಿದರು.
ಗೆಳೆಯರೊಂದಿಗೆ ಸೇರಿ ಕಟ್ಟಿರುವ ರಂಗ ಚಿನ್ನಾರಿ ಸಂಸ್ಥೆಯು ತನ್ನ ಮನೆಯಲ್ಲೇ ರಂಗ ಕುಟೀರ ಕಟ್ಟಿಕೊಂಡು ನಿರಂತರ ಸಾಂಸ್ಕೃತಿಕ ಚಟುವಟಿಕೆಯನ್ನು ಮಾಡುತ್ತಲಿದೆ.
ಸ್ವತಃ ಸಾಹಿತಿಯಾಗಿಯೂ ಕಾಸರಗೋಡು ಚಿನ್ನಾ ಸಾಧನೆ ಗೈದಿದ್ದಾರೆ. ಕನ್ನಡ, ತುಳು ಮಲಯಾಳಂಗಳಿಂದ ಹಲವು ಕೃತಿಗಳನ್ನು ಕೊಂಕಣಿಗೆ ಅನುವಾದಿಸಿದ್ದಾರೆ. ಅವರು ಅನುವಾದಕ್ಕಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. ರಾಷ್ಟ್ರಮಟ್ಟದ ಅಜಿತಶ್ರೀ ಪ್ರಶಸ್ತಿಗೆ ಭಾಜನರಾದ ಅವರನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯಿತ್ತು ಸನ್ಮಾನಿಸಿದೆ.
ಸಂದೇಶ ಶಿಕ್ಷಣ ಪ್ರಶಸ್ತಿ- ಡಾ. ಪಿ.ಕೆ. ರಾಜಶೇಖರ್
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಶ್ರೀಮತಿ ಪುಟ್ಟಮ್ಮ ಹಾಗೂ ಶ್ರೀ ಕೆಂಪೇಗೌಡರ ಪುತ್ರರಾಗಿ ಜನಿಸಿದ ಪಿ.ಕೆ.ರಾಜಶೇಖರ ಅವರು ನಾಡಿನ ಶ್ರೇಷ್ಠ ಅಧ್ಯಾಪಕರಾಗಿ, ಜಾನಪದ ವಿದ್ವಾಂಸರಾಗಿ, ಜಾನಪದ ಗಾಯಕರಾಗಿ ಗುರುತಿಸಲ್ಪಟ್ಟವರು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು, ಅಪಾರ ಸಂಖ್ಯೆಯ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾದ ಗುರುಗಳಾಗಿ, ನಿವೃತ್ತಿ ಪಡೆದವರು. ಅಧ್ಯಾಪನದ ಜೊತೆ ಜೊತೆಗೇ ಜಾನಪದವನ್ನು ಉಸುರಿಗಂಟಿಸಿ ಕೊಂಡವರು. ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಸಾವಿರದ ಐನೂರು ಪುಟಗಳ ʻಮಲೆಮಹದೇಶ್ವರʼ ಮಹಾಕಾವ್ಯವನ್ನು ಸಂಪಾದಿಸಿ ಪ್ರಕಟಿಸಿದವರು. ಜನಪದ ಮೂಲಮಟ್ಟುಗಳನ್ನು ಅದರ ಮೂಲಬನಿಯಲ್ಲಿಯೇ ಉಳಿಸಿಬೆಳೆಸುವಂತೆ ಮಾಡುವಲ್ಲಿ ಅವರ ʻಹೊನ್ನಾರು ಜನಪದ ಗಾಯನ ವೃಂದʼಮಾಡಿರುವ ಕೆಲಸ ಶಾಶ್ವತ ರೂಪದ್ದಾಗಿದೆ. ʻಜನಪದ ಮಹಾಭಾರತʼವೆಂಬುದು ಅವರ ಮತ್ತೊಂದು ಮಹಾಕಾವ್ಯ. ಜಾನಪದ ಕುರಿತಾಗಿಯೇ ಸುಮಾರು ಅರುವತ್ತಕ್ಕೂಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಇದಲ್ಲದೆಯೂ ಭಾಷಾಶಾಸ್ತ್ರ, ಮಕ್ಕಳ ಸಾಹಿತ್ಯ, ಕಾವ್ಯ, ಜೀವನ ಚರಿತ್ರೆ ಇತ್ಯಾದಿ ಕ್ಷೇತ್ರಗಳಲ್ಲಿ ಕೂಡ ಕೃತಿ ರಚನೆ ಮಾಡಿದ್ದಾರೆ. ಇವರ ಸಾಧನೆಯನ್ನು ಕರ್ನಾಟಕ ಸರಕಾರ ಮೆಚ್ಚಿಕೊಂಡು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಇತರ ಪ್ರಮುಖ ಸಂಘ ಸಂಸ್ಥೆಗಳು ಡಾ. ಪಿ.ಕೆ. ರಾಜಶೇಖರ ಅವರನ್ನು ಪ್ರಶಸ್ತಿಗಳಿಂದ ಪುರಸ್ಕರಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ. ಅನೇಕ ಶಿಷ್ಯರನ್ನು ಜಾನಪದ ಕ್ಷೇತ್ರಕ್ಕಾಗಿಯೇ ಸಿದ್ಧಪಡಿಸಿಕೊಟ್ಟಿದ್ದಾರೆ.
ಸಂದೇಶ ವಿಶೇಷ ಪ್ರಶಸ್ತಿ- ಸ. ರಘುನಾಥ್
ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ನೆಲೆಗೊಂಡಿರುವ ಸ. ರಘುನಾಥ ಅವರು ವೃತ್ತಿಯಲ್ಲಿ ಅಧ್ಯಾಪಕರು. ಪ್ರವೃತ್ತಿಯಲ್ಲಿ ಸಮಾಜಸೇವಕರು. ಆದರೆ ಎಂದೂ ತಾವೊಬ್ಬ ಸಮಾಜಸೇವಕ ಎಂದು ತೋರ್ಪಡಿಸಿಕೊಳ್ಳದೆ, ಮರದೊಳಗಣ ಕಿಚ್ಚಿನಂತೆ ಗೌಪ್ಯತೆಯನ್ನು ಕಾಪಾಡಿಕೊಂಡವರು. ಮಕ್ಕಳನ್ನು ರಘುನಾಥ್ ಅವರು ಕಂಡುಕೊಂಡ ಬಗೆಯೇ ಬೇರೆ. ಮಕ್ಕಳಿಗೆ ಕನ್ನಡ- ತೆಲುಗು ಭಾಷೆಗಳಲ್ಲಿ ಕತೆ ಹೇಳುವುದನ್ನು ರೂಢಿಸಿಕೊಂಡ ರಘುನಾಥ ಅವರು ಇದುವರೆಗೆ ಸುಮಾರು ಹನ್ನೆರಡು ಸಾವಿರ ಮಕ್ಕಳಿಗೆ ಕತೆ ಹೇಳಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಸತಿ, ಊಟೋಪಚಾರಗಳನ್ನು ನೀಡಿ ಅವರನ್ನು ಶೈಕ್ಷಣಿಕವಾಗಿ ಬೆಳೆಸಿದ್ದಾರೆ. ʻನಮ್ಮಮಕ್ಕಳುʼ ಎಂಬ ಸಂಸ್ಥೆಯನ್ನು ಸಮಾನ ಆಸಕ್ತರ ನೆರವಿನಿಂದ 1995 ರಲ್ಲಿ ಹುಟ್ಟು ಹಾಕಿದ್ದಷ್ಟೇ ಅಲ್ಲ; ಭಿಕ್ಷುಕರು, ಅಂಗವಿಕಲರು, ಅನಾಥರು ಎಲ್ಲರಿಗೂ ಅದು ಅಭಯ ನೀಡಿದೆ. ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ, ಅವರು ವಿವಿಧ ಹುದ್ದೆಗಳಿಗೆ ತಲುಪುವಂತೆ, ಸಮಾಜದ ಯೋಗ್ಯ ಪ್ರಜೆಗಳಾಗಿ ರೂಪುಗೊಳ್ಳುವಂತೆ ನಿರಂತರ ನೋಡಿಕೊಳ್ಳಲಾಗಿದೆ.
ಮಕ್ಕಳ ಹಾಗೆಯೇ ಗಾಯಗೊಂಡ ಪ್ರಾಣಿಪಕ್ಷಿಗಳಿಗೂ ಆದ್ಯತೆ ನೀಡಿ ಆರೈಕೆ ಮಾಡಿದವರು ಸ. ರಘುನಾಥರು.
ಅಲೆಮಾರಿಗಳಾಗಿದ್ದ ಅದೆಷ್ಟೋ ಜನರು ಬದುಕಿನಲ್ಲೊಂದು ನೆಲೆಕಂಡುಕೊಳ್ಳುವಂತೆ ಮಾಡಲು ʻಹಸಿರುಹೊನ್ನೂರುʼ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿಕೊಟ್ಟವರು. ರೈತರ ಸಂಘಟನೆಗಾಗಿ ಶ್ರಮಿಸಿದವರು. ರೈತ ಸಂಘಟನೆಗಾಗಿಯೇ ಪತ್ರಿಕೆಯೊಂದನ್ನು ರೂಪಿಸಿ ಅದರ ಸಂಪಾದನೆ ಮಾಡುತ್ತಿದ್ದಾರೆ.
ರಘುನಾಥ ಅವರ ಸಾಹಿತ್ಯ ಪ್ರೀತಿ ಅಪಾರವಾದುದು. ಕೇವಲ ಹತ್ತನೆಯ ತರಗತಿಯವರೆಗೆ ಮಾತ್ರ ಕಲಿತಿದ್ದರೂ ಲೋಕಜ್ಞಾನ ಅವರಿಂದ ಅರುವತ್ತೈದಕ್ಕೂ ಅಧಿಕಕೃತಿಗಳನ್ನು ಬರೆಯಿಸಿದೆ. ಕವನ ಸಂಕಲನ, ಸಣ್ಣ ಕತೆಗಳು, ವಿಮರ್ಶೆ, ಮಕ್ಕಳ ಸಾಹಿತ್ಯ, ಅನುವಾದ, ಸಂಪಾದನೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಶ್ರೀಯುತರು ಕೆಲಸ ನಿರ್ವಹಿಸಿದ್ದಾರೆ. ಇಂದಿಗೂ ಸ. ರಘುನಾಥ ಅವರಿಗೆ ಖಾಯಂ ವಿಳಾಸವಿಲ್ಲ.
ಕಲಾಸಕ್ತರು, ಸಾಹಿತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕರು ಮನವಿ ಮಾಡಿರುತ್ತಾರೆ.