Media Release
Mangaluru, May 21 : Mr. Joachim Stany Alvares, President of the Karnataka Konkani Sahitya Academy, along with the members of the academy, recently visited the house of renowned Konkani novelist late Joachim Santan Alvares and had a cordial discussion with his family members.
ಕೊಂಕಣಿ ಅಕಾಡಮಿಯ ಅಧ್ಯಕ್ಷರಿಂದ ಹೆಸರಾಂತ ಕೊಂಕಣಿ ಸಾಹಿತಿಯ ಕುಟುಂಬದ ಭೇಟಿ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ಜೋಕಿಮ್ ಸ್ಟ್ಯಾನಿ ಆಲ್ವಾರಿಸ್ ಅವರು ಇತ್ತೀಚೆಗೆ ಅಕಾಡೆಮಿಯ ಸದಸ್ಯರಾದ ಶ್ರೀಯುತ ನವೀನ್ ಲೋಬೊ ಹಾಗೂ ಅಕಾಡೆಮಿಯ ಕೊಂಕಣಿ ಸಾಹಿತ್ಯ ಭಾಷಾಂತರ ಕಾರ್ಯಯೋಜನೆಯ ಪ್ರಧಾನ ಸಂಪಾದಕರಾದ ಸ್ಟೀವನ್ ಕ್ವಾಡ್ರಸ್ ಪೆರ್ಮುದೆಯವರೊಡನೆ ಸೇರಿಕೊಂಡು ಕೊಂಕಣಿಯ ಹೆಸರಾಂತ ಕಾದಂಬರಿಕಾರ ದಿ. ಜೋಕಿಮ್ ಸಂತಾನ್ ಆಲ್ವಾರಿಸ್ವ ರವರ ಮನೆಯಲ್ಲಿ ಅವರ ಕುಟುಂಬಸ್ಥರ ಜೊತೆ ಸೌಹಾರ್ಧ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸ್ವರ್ಗಸ್ಥ ಕಾದಂಬರಿಕಾರರ ಪತ್ನಿ 94 ವರ್ಷ ಪ್ರಾಯದ ಶ್ರೀಮತಿ ಮೋನಿಕಾ ಆಲ್ವಾರಿಸ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

.jpg)
.jpg)
.jpg)
.jpg)
ದಿ. ಜೋಕಿಮ್ ಸಂತಾನ್ ಆಲ್ವಾರಿಸ್
ಈ ಮಾತುಕತೆಯ ಸಂದರ್ಭದಲ್ಲಿ ಜೊ.ಸಾ ಆಲ್ವಾರಿಸ್ವ ರವರು ಬರೆದ ಕನ್ನಡ ಲಿಪಿ ಕೊಂಕಣಿಯ ಪ್ರಪ್ರಥಮ ಕಾದಂಬರಿ ‘ಆಂಜೆಲ್ ಗೆ 75 ವರ್ಷಗಳು ತುಂಬುವ ಸಂಭ್ರಮದ ಕುರಿತು, ಆ ಸಂಭ್ರಮದ ಸಿದ್ಧತೆಗಾಗಿ ಜುಲೈ 13, 2025 ರಂದು ಸಂದೇಶ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಾಗಾರದ ಕುರಿತು ಹಾಗೂ ಅಕಾಡೆಮಿಯು ಆ ಕಾದಂಬರಿಯನ್ನು ಕನ್ನಡ ಹಾಗೂ ಇಂಗ್ಲೀಶ್ ಭಾಷೆಗಳಿಗೆ ಭಾಷಾಂತರ ಮಾಡಲಿರುವ ಕುರಿತು ಅಭಿಪ್ರಾಯ ವಿನಿಮಯ ಮಾಡಲಾಯಿತು ಹಾಗೂ ಕುಟುಂಬಸ್ಥರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.
1950ರಲ್ಲಿ ಜೊಕಿಮ್ ಸಂತಾನ್ ಅಲ್ವಾರಿಸ್ ‘ಆಂಜೆಲ್ ಎಂಬ ಸುಂದರ ಸಾಮಾಜಿಕ ಕಾದಂಬರಿಯನ್ನು ಬರೆದರು. ‘ಜೊಸಾ’, ‘ಜೊಸ್ಯಾ’, ‘ಜೊಸಾ ಆಲ್ವಾರಿಸ್’ ಎಂದೆಲ್ಲಾ ಹೆಸರುಳ್ಳ ಜೊಕಿಮ್ ಸಂತಾನ್ ಅಲ್ವಾರಿಸರ ಈ ಕೃತಿಯನ್ನು ಕನ್ನಡ ಲಿಪಿ ಕೊಂಕಣಿಯ ಪ್ರಥಮ ಕಾದಂಬರಿ ಎಂದೇ ಗುರುತಿಸಲಾಗಿದೆ. ಈ ಕೃತಿಯು ಸಾಮಾಜಿಕ ಕಾದಂಬರಿ ಆಗಿದೆಯಾದರೂ ಆ ತನಕ ಕೊಂಕಣಿ ಕಥೋಲಿಕರ ನಡುವೆ ಪ್ರಚಲಿತದಲ್ಲಿದ್ದ ಒಳಿತು-ಕೆಡುಕಿನ ನೈತಿಕ ಸಂಘರ್ಷದ ನೆಲೆಯಲ್ಲಿಯೇ ಮುಂದುವರೆಯುತ್ತದೆ. ಬಡತನದ ಬೇಗೆಯಲ್ಲಿ ಬೆಂದರೂ, ಹಸಿವಿನಿಂದ ಕಂಗಾಲಾದರೂ ಸಂಪತ್ತಿನ ಲಾಲಾಸೆಯನ್ನು ಒಡ್ಡುವ ಒಡೆಯನ ಮುಂದೆ ಸೋಲದೆ ತನ್ನ ಮಾನ ಉಳಿಸಿಕೊಳ್ಳುವ, ಸೇನೆಗೆ ಸೇರಿ ಸುದ್ದಿಯ ಹೊರಗಾದ ತನ್ನ ಪತಿಗಾಗಿ ಕಾಯುತ್ತ ಅತ್ತೆಯನ್ನು ಸಾಕುತ್ತಾ ಬದುಕುವ ಪತಿವ್ರತೆಯ ವಿಜಯ ಹಾಗೂ ಆ ಪತಿವ್ರತೆಯ ಸದ್ಗುಣಕ್ಕೆ ಸೋತು ಪರಿವರ್ತನೆ ಹೊಂದುವ ಶ್ರೀಮಂತ ಒಡೆಯನ ಕಥೆಯನ್ನು ಇಲ್ಲಿ ಮುಂದಿಡಲಾಗಿದೆ. ಕಥೋಲಿಕ ಲೈಂಗಿಕ ಪರಿಶುದ್ಧತೆಯ ನೀತಿಶಾಸ್ತ್ರದ ಬೋಧನೆಯ ಸಾಧನವಾಗಿ ಸಾಹಿತ್ಯ ಇಲ್ಲಿ ಬಳಸಲ್ಪಟ್ಟಿದೆ.
ಜೊಸಾ ಅಲ್ವಾರಿಸ್ ಮುಂದಿನ ಸುಮಾರು ಮೂವತ್ತು ವರುಷ ಹಲವಾರು ಮಹತ್ವದ ಕಾದಂಬರಿ, ಕಥಾಗುಚ್ಛಗಳು ಹಾಗೂ ಲೇಖನ ಮಾಲೆಗಳನ್ನು ಪ್ರಕಟಿಸಿದರು. ‘ಮಿತ್ರ್’ ಹಾಗೂ ‘ಝೆಲೊ’ ಎಂಬ ಎರಡು ನಿಯತಕಾಲಿಕೆಗಳ ಮುಖಾಂತರ ಕೊಂಕಣಿ ಸಾಹಿತ್ಯ ವಿಸ್ತರಣೆಗಾಗಿ ಅವರು ದುಡಿದರು. ಕೊಂಕಣಿಯಲ್ಲಿ ಮಹತ್ವದ ಸಾಹಿತ್ಯ ಕೃತಿಗಳು ಪ್ರಕಟಗೊಳ್ಳುವಂತಾಗಲು ‘ಕೊಂಕ್ಣಿ ಸ್ವತಂತ್ರ್ ಪ್ರಕಾಶನ್’ ಪ್ರಕಟಣಾ ಸಂಸ್ಥೆಯನ್ನು ಆರಂಭಿಸಿದರು.
1951ರಲ್ಲಿ ಅವರ ‘ಆಗ್ನೆಸ್ ಮಾವ್ಶಿ’, ‘ತೆರೆಜಾ ಚತ್ರಾಯ್’ ಕಾದಂಬರಿಗಳು ಬೆಳಕು ಕಂಡವು. ‘ಆಂಗೊವ್ಣೆಚಿ ಕಾಲ್ಸ್’ (1952), ‘ಆವಿಲಾಚೆಂ ಜಯ್ತ್ ಆನಿ ಫಾರಿಕ್ಪಣ್’ (1953) ‘ಮ್ಹಜ್ಯಾ ಕಾಜಾರಾಚಿ ಕಥಾ’ (1953), ‘ನೊವ್ರೊ ಜಾಯ್’ (1953), ‘ಆಲೆಸಾಚೆಂ ದಾಯ್ಚ್’ (1954) ‘ಮ್ಹಜ್ಯಾ ಸಂಯ್ರಿಕೆಚಿ ಕಥಾ’ (1954) ‘ಕವಿ ಆನಿ ರೋಜ್ಮೇರಿ’ (1954). ‘ಬೆಜಿಲಾಚೆಂ ಸ್ವಪಾಣ್’ (1955), ‘ಚೆಡುಂ ತೆಂ ಚೆಡುಂಚ್’ (1960), ‘ಹಾಂವ್ ಅಪಾಯಾಂತ್ ಆಸಾಂ’ (1961), ‘ಎಸ್ತೆಲ್ ತೆಗಾಂಚಿ ಹೊಕಾಲ್’-ನಾಟಕ (1966) ಮುಂತಾದ ಪ್ರಮುಖ ಕೃತಿಗಳನ್ನು ಅವರು ರಚಿಸಿದ್ದಾರೆ.
ಎಪ್ಪತ್ತನೇ-ಎಂಬತ್ತನೇ ದಶಕದಲ್ಲಿ ಜೊಸ್ಯಾರ ಸಾಹಿತ್ಯವು ಸಾಮಾಜಿಕ ಬದುಕಿನಲ್ಲಿ ಕಂಡುಬರುವ ದ್ವಂದ್ವಗಳು, ವ್ಯಕ್ತಿ ವ್ಯಕ್ತಿಗಳ ಸಂಬಂಧಗಳಲ್ಲಿ ಪ್ರಸ್ತುತಗೊಳ್ಳುವ ವೈರುದ್ದ್ಯಗಳನ್ನು ಬಿಂಬಿಸತೊಡಗಿತು. ಇವರ ಕೃತಿಗಳಲ್ಲಿ ಒಳಿತು-ಕೆಡುಕಿನ ಸಂಘರ್ಷ ವ್ಯಕ್ತಿಗಳೊಳಗೆ ವಿಶೇಷವಾಗಿ ಅವರ ಚಿಂತನೆಯ ನೆಲೆಯ ದ್ವಂದ್ವದಲ್ಲಿ ಕಂಡುಬರತೊಡಗಿತು. ಅವರ ‘ಮತ್ಲಬಿ ಮೊನಿಕಾ’ (1969), ‘ಜುಜೆ ಆನಿ ಸೆವ್ರಿನ್ (1967) ಮೂರು ಭಾಗಗಳಲ್ಲಿ ಪ್ರಕಟವಾದ ‘ಬೊಂಬಯ್ ಮೇರಿ’(1970), ‘ಜಲ್ಮಾಚೊ ಘುಟ್ʼ (1975), ‘ನವ್ಯಾ ಘರಾಂತ್ಲಿ ಖುನ್ (1975) ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ತನ್ನ ಪಾತ್ರಗಳಲ್ಲಿ ಕಂಡುಬರುವ ನೈತಿಕತೆಯ ಕುರಿತಾದ ತಲ್ಲಣ ಹಾಗೂ ದ್ವಂದ್ವ ಮನೋಸ್ಥಿತಿ ಅದೇ ರೀತಿ ಮನೋಭೂಮಿಕೆಯಲ್ಲಿ ಉಂಟಾಗುವ ತಿಕ್ಕಾಟಗಳನ್ನು ಓದುಗರ ಮುಂದೆ ಪ್ರಸ್ತುತಪಡಿಸುವಲ್ಲಿ ಅವರು ಸಾಧಿಸುವ ಯಶಸ್ವಿಯನ್ನು ಅವರ ‘ತೆರೆಜಾ ಚತ್ರಾಯ್’, ‘ಈವಾಕ್ 13ವಿ ಸಯ್ರಿಕ್’, ‘ಹಾಂವ್ ಅಪಾಯಾಂತ್ ಆಸಾಂ’ ಹಾಗೂ ‘ಚೊಟ್ಟೊ ಬರವ್ಪಿ’ ಕೃತಿಗಳಲ್ಲಿ ನಾವು ಕಾಣಬಹುದಾಗಿದೆ.
ಜೊಸಾ ದೀರ್ಘಕಾಲ, ಹಲವು ಶ್ರೇಷ್ಠ ಕೃತಿಗಳ ಮೂಲಕ ಕೊಂಕಣಿ ಸರಸ್ವತಿಯನ್ನು ಸಂತೃಪ್ತಿಪಡಿಸಿದರು. ಕುಟುಂಬ ಜೀವನದ ಶ್ರೇಷ್ಠತೆಯ ಹಾಗೂ ಲೈಂಗಿಕ ಪರಿಶುದ್ಧತೆಯ ಮಹತ್ವದ ಸಂದೇಶ ಸಾರಲು ಅವರ ಹೆಚ್ಚಿನ ಕೃತಿಗಳು ಶ್ರಮಿಸುತ್ತವೆ. ಅವರು ಎಂಬತ್ತನೇ ದಶಕದಲ್ಲಿ ತನ್ನ ಆತ್ಮಚರಿತ್ರೆ ‘ಮ್ಹಜ್ಯಾ ಜಿವಿತಾಚಿ ಕಥಾʼವನ್ನು ಬರೆದರು. ಇದು ಕೊಂಕಣಿಯಲ್ಲಿ ಈ ತನಕ ಬರೆಯಲ್ಪಟ್ಟ ಪ್ರಥಮ ವಿಸ್ತೃತ ಆತ್ಮಕಥನ ಎಂದು ಮಾತ್ರವಲ್ಲ ಸುಂದರವಾಗಿ ಹಣೆಯಲ್ಪಟ್ಟ ಆತ್ಮಕಥನ ಎಂದೂ ಖ್ಯಾತವಾಗಿದೆ. ಹೀಗೆ ಜೊಕಿಮ್ ಸಂತಾನ್ ಅಲ್ವಾರಿಸರು ಕನ್ನಡ ಕೊಂಕಣಿ ಕಾದಂಬರಿಗಳ ಪಿತಾಮಹರಾಗಿ, ಹಲವಾರು ಮಹತ್ವದ ಕಾದಂಬರಿಗಳ ಕತೃರಾಗಿ, ಕೊಂಕಣಿಯ ನಿಷ್ಠಾವಂತ ಕಾರ್ಯಕರ್ತನಾಗಿ ಕೊಂಕಣಿ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಹೊಂದಿದ್ದಾರೆ.


.png)
.png)
.png)