ಕೊರೊನಾ ವ್ಯೆರಸ್‍ನಿಂದಾಗಿ ದಿನನಿತ್ಯ ನಾವು ಸೋಂಕು ತಗುಲಿದವರ ಹಾಗೂ ಸಾವನಪ್ಪಿದವರ ಲೆಕ್ಕ ಹಾಕುತ್ತಾ ಇದ್ದೇವೆ. ಅನಿಶ್ಚತತೆಯ ಕಾರ್ಮೋಡಗಳು ನಮ್ಮ ಮೇಲೆ ಹಾರಾಡಿ ನಮ್ಮ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ನಿಲ್ಲಬಹುದು ಎಂದು ಕಂಗೆಟ್ಟಿದ್ದೇವೆ. ಇಂತಹ ವಾಸ್ತವಿಕ ಪರಿಸ್ಥಿತಿಯಲ್ಲಿ ದಿನಕಳೆಯುತ್ತಿರುವಾಗ, ಯೇಸುಸ್ವಾಮಿ ಸಾವನಪ್ಪಿ,ಮರಣವನ್ನು ಜಯಿಸಿ ಪುನಃ ಜೀವಂತರಾಗಿ ಬಂದ ಪಾಸ್ಕಾ ಹಬ್ಬವನ್ನು ಆಚರಿಸುತ್ತಾ ಇದ್ದೇವೆ.

ಯೇಸುವು ಪವಿತ್ರಾತ್ಮರ ಶಕ್ತಿಯಿಂದ ಕನ್ಯಾ ಮರಿಯಳಲ್ಲಿ ಹುಟ್ಟಿ ಬಂದರು. ತನ್ನ ಜೀವನದ ಅಂತಿಮ ಮೂರು ವರುಷಗಳಲ್ಲಿ ಅನೇಕ ಬೋಧನೆಗಳನ್ನು, ಪವಾಡಗಳನ್ನು ಮಾಡುತ್ತಾ, ಕೊನೆಗೆ ಕ್ರೂರ ಮರಣವನ್ನು ಸ್ವೀಕರಿಸಿದರು. ಆದರೆ ದೇವರು ಅವರನ್ನು ಸಮಾಧಿಯಲ್ಲಿ ಕೊಳೆಯಲು ಬಿಡಲಿಲ್ಲ. ಸತ್ತು ಮೂರನೆಯ ದಿನ ಅವರು ಜೀವಂತರಾಗಿ ಎದ್ದು ಬಂದರು. ತನ್ನ ಶಿಷ್ಯರಿಗೆ ಕಾಣಸಿಕ್ಕರು ಹಾಗೂ ತನ್ನ ಮೇಲೆ ವಿಶ್ವಾಸವಿಟ್ಟ ಪ್ರತಿಯೊಬ್ಬರಿಗೂ ಅನಂತ ಜೀವವನ್ನು ಕೊಡುವೆನೆಂದು ವಾಗ್ದಾನವನ್ನು ಮಾಡಿದರು.

"ಪುನರುತ್ಥಾನವೂ ಜೀವವು ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ" ಎಂದು ಯೇಸು ನಮಗೆಲ್ಲರಿಗೂ ಕೇಳುತ್ತಾ ಇದ್ದಾರೆ.

ನಾವು ಯೇಸುವಿನ ಬೋಧನೆಯನ್ನು ಕೇಳಿ, ಓದಿ, ಅರಿತು, ಜೀವನ ಸುಧಾರಿಸಿಕೊಳ್ಳುವುದು ಮಾತ್ರವಲ್ಲ; ಬದಲಾಗಿ ಯೇಸುವೇ ಸ್ವತಃ ನಮ್ಮ ಕತ್ತಲೆ ಕವಿದ ಜೀವನದಲ್ಲಿ ಪ್ರವೇಶಿಸಿ ನವ ಜೀವನವನ್ನು ನಮಗೆ ಕೊಡುತ್ತಾರೆ ಎಂದು ನಂಬುತ್ತೇವೆ. ಸಾವಿನ ಬಗ್ಗೆ ನಮ್ಮಲ್ಲಿದ್ದ ಭಯವನ್ನು ಹೋಗಲಾಡಿಸಿ ಪುನರುತ್ಥಾನಕ್ಕೆ ಬಾಧ್ಯರಾದವರಂತೆ ಜೀವಿಸಲು ಅವರು ನಮ್ಮನ್ನು ಆಹ್ವಾನಿಸುತ್ತಾರೆ. "ಮಾರ್ಗವೂ, ಸತ್ಯವೂ, ಜೀವವೂ ನಾನೆ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು" ಎಂದ ಅವರು, ಪ್ರೀತಿಯ ಮಾರ್ಗವನ್ನು ತೋರಿಸಿ, ಅವರಿರುವೆಡೆಯಲ್ಲಿಯೇ ನಾವೂ ಇರಬೇಕೆಂದು ನಮ್ಮನ್ನು ಕರೆಯುತ್ತಾರೆ.

ಯಾರು ಪ್ರೀತಿಯ ಹಾದಿಯಲ್ಲಿ ನಡೆಯುತ್ತಾರೊ, ಯಾರ ಅಂತಃಕರಣ ಸ್ವಚ್ಛವಾಗಿದೆಯೊ, ಅವರಿಗೆ ಸಾವಿನ ಭಯವಿಲ್ಲ. "ಸತ್ತರೂ ದೇವರು ಹೊಸ ಜೀವನವನ್ನು ನನಗೆ ಕೊಡುವರು" ಎಂಬ ವಿಶ್ವಾಸದಿಂದ ಜೀವಿಸುವ ಪ್ರತಿಯೊಬ್ಬರಿಗೂ ಪಾಸ್ಕಾಹಬ್ಬದ ಸಂತೋಷವನ್ನು ಅವರು ದಯಪಾಲಿಸುತ್ತಾರೆ. ಅಂತಹ ಸಂತೋಷ ಹಾಗೂ ತೃಪ್ತಿ ನಮಗೆಲ್ಲರಿಗೂ ಲಭಿಸಲಿ. ನಿಮಗೆಲ್ಲರಿಗೂ ಪಾಸ್ಕಾ ಹಬ್ಬದ ಶುಭಾಶಯಗಳು.

ವಂದನೀಯ ಪೀಟರ್ ಪಾವ್ಲ್ ಸಲ್ದಾನ್ಹಾ,
ಧರ್ಮಾಧ್ಯಕ್ಷರು, ಮಂಗಳೂರು ಧರ್ಮಪ್ರಾಂತ್ಯ

Comments powered by CComment

Home | News | About Us | Sitemap | Contact

Copyright © 2015 - www.catholictime.com. All rights reserved.

Powered by eCreators.