Photo by Noah Buscher on Unsplash

ಅದೊಂದು ಕಾಲವಿತ್ತು ಬಾಲ್ ಪೆನ್ ಎಂಬ ಲೇಖನಿಗಳಿಗೆ ರೀಫಿಲ್ಲುಗಳು ಸಿಗುತ್ತಿದ್ದವು. ಪೆನ್ ಜೊತೆಗೊಂದು ಭಾವನಾತ್ಮಕ ಬಾಂಧವ್ಯ ಬೆಳೆದಿರುತ್ತಿತ್ತು. ಆಮೇಲೆ ವಿದೇಶಗಳಿಂದ ಊರಿಗೆ ಬರುವ ಅಣ್ಣಂದಿರು ತಂದು ಬರೆದು ಎಸೆಯುವ ಪೆನ್ನುಗಳನ್ನು ಕಂಡು ಆಶ್ಚರ್ಯಪಟ್ಟವರೆಷ್ಟೊ. ಕಾಲಕ್ರಮೇಣ ಬಳಸಿ ಮತ್ತುಎಸೆಯುವ ಪೆನ್ನುಗಳು ನಮ್ಮ ದೇಶದ ಹಳ್ಳಿಗೂ ಬಂದವು. ಬರೆದೆಸೆಯುವ ಪೆನ್ನಿನ ಬಗೆಗೊಂದು ಅಚ್ಚರಿ. ಇಂದು ರೀಫಿಲ್ಲಿನ ಅಗತ್ಯವೇ ಇಲ್ಲ. ಬರೆದೆಸೆಯುವ ಪೆನ್ನುಗಳೇ ಆರಾಮಾಗಿದೆ.

ಇವತ್ತು, ಬಳಸಿ ಮತ್ತು ಎಸೆಯಿರಿ ಬರೀ ಪೆನ್ನಿಗೆ ಸೀಮಿತವಲ್ಲ. ಚೈನಾ ವಸ್ತುಗಳು ಹೆಚ್ಚಾಗಿ ಬಳಸಿ ಎಸೆಯುವ ಸಿದ್ಧಾಂತದಲ್ಲೇ ತಯಾರಾಗುತ್ತವೆ. ವ್ಯಾಪಾರಿಕರಣದಲ್ಲಿ ಲಾಭದಾಯಕ ಈ ಬಳಸಿ ಎಸೆಯುವ. ಜನರು ಇಂದು ಈ ಪರಿಕಲ್ಪನೆಯ ವಸ್ತುಗಳನ್ನೇ ನೆಚ್ಚುತ್ತಾರೆ. ದೀರ್ಘ ಬಾಳಿಕೆಯ ಒಂದು ವಸ್ತುವಿಗಿಂತ ಕಡಿಮೆ ದರದ ಕಡಿಮೆ ಬಾಳಿಕೆಯ ವಸ್ತುವಾದರೆ ಬಳಸಿ ಎಸೆದರೆ ನಂತರ ಹೊಸ ಮಾದರಿ ಗಳು ಸಿಗುತ್ತವೆ. ಆದರೆ ಕಳೆದ ಶತಮಾನದಲ್ಲಿ ಜನ ಹೆಚ್ಚು ಹೆಚ್ಟು ವಸ್ತುಗಳೊಂದಿಗೆ ಭಾವನಾತ್ಮಕ ನಂಟು ಬೆಸೆದುಕೊಂಡಿದ್ದರು. ಈಗಲೂ ಸಹ ನಮ್ಮ ಮನೆಯ ಹಳೆಯ ರೇಡಿಯೊ, ಟಿವಿಗಳು ನೆನಪಿನ ಪುಟದಲ್ಲಿ ದಾಖಲಿದೆ. ಅವುಗಳನ್ನು ನೆನೆದಾಗ ಯಾವುದೋ ಹಳೆಯ ನೆನಪು ಮೀಟೀದಂತೆ. ಮೊನ್ನೆ ಬದಲಾಯಿಸಿದ ಮೊಬೈಲ್ ಫೋನಿನ ಚಿತ್ರ ಕಣ್ಣಮುಂದೆ ಬರುವುದಿಲ್ಲ. ಈಗಿನ ವಸ್ತುಗಳು ಭಾವನಾತ್ಮಕವಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ಕೊಟ್ಟೆಯಷ್ಟೆ.

ಇಂದು ವಸ್ತುಗಳಷ್ಟೇ ಅಲ್ಲ ಮನುಷ್ಯರೂ ಬಳಸಿ ಎಸೆಯುವ ಸಿದ್ದಾಂತ ಆಗಿರುವುದು ವಿಷಾದನೀಯ. ಆದರೆ, ನಮ್ಮಮ್ಮನ ಕಾಲದ ಸಿದ್ಧಾಂತಗಳು ಬಳಸಿ ಎಸೆಯುವ ಸಿದ್ದಾಂತಗಿಂತಲೂ ಭಿನ್ನವಾಗಿದ್ದವು. ಯಾವ ಹೊಸ ವಸ್ತು ಬಂದರೂ ನಮ್ಮಮ್ಮನವರು ಅದು ಉಪಯೋಗಿಸಿದ ಮೇಲೆ ಬೇರೆ ಏನಕ್ಕೆ ಬಳಸಬಹುದು ಎಂದು ಅಂದಾಜಿಸುತ್ತಿದ್ದರು. ಬಾಟಲಿಗಳು ಉಪಯೋಗಿಸಿದ ಮೇಲೆ ಎಣ್ಣೆ ಹಾಕಿಡುವ ಶೀಶೆಗಳಾಗುತ್ತಿದ್ದವು. ಹರಿದ, ಮಡಿಕೆ ಕಟ್ಟಿದ ಸೀರೆಗಳು ಕೌದಿಯಾಗುತ್ತಿದ್ದವು, ಅಪ್ಪನ ಹರಿದ ಪ್ಯಾಂಟು ಕೈ ಚೀಲವಾಗುತ್ತಿತ್ತು. ಹೀಗೆ ಕಸದಿಂದ ರಸ ಮಾಡುವ ಕಲೆ, ಬಳಸಿ ಎಸೆಯುವ ಸಿದ್ದಾಂತಗಿಂತಲೂ ಭಿನ್ನವಾದ ಸಿದ್ಧಾಂತ.

ಕಾಲೊರೆಸು, ಕೈಬಟ್ಟೆ ಮುಂತಾದವುಗಳಿಗೆ ಹಳೆಯ ವಸ್ತ್ರಗಳನ್ನೇ ಉಪಯೋಗಿಸುತ್ತಿದ್ದದ್ದು ವಾಡಿಕೆ ಆದರೆ ಇಂದು ಮಾಲುಗಳಲ್ಲಿ ಅದಕ್ಕೆಂದೇ ತರಹೇವಾರಿ ಮಕಮಲ್ಲು ಬಟ್ಟೆಗಳ ಸಂಗ್ರಹವೇ ಇದೆ! ಇತ್ತೀಚಿಗೆ ಪೇಟೆಬೀದಿಗಳಲ್ಲಿ ಮನೆಯ ಅಂಗಳ ಗುಡಿಸಲಿಕ್ಕೆ, ಮನೆಯ ನೆಲವನ್ನು ಒರೆಸಲಿಕ್ಕೆ ಪ್ರತ್ಯೇಕವಾಗಿ ತಯಾರಾದ ಪೊರಕೆಗಳನ್ನೂ ಒರಸುಬಟ್ಟೆಗಳನ್ನೂ ಗಮ ನಿಸಿದಾಗ ಬೆರಗೂ ವಿಷಾದವೂ ಉಂಟಾದವು. ಈಗಲೂ ನಮ್ಮ ಮನೆಯಲ್ಲಿ ಮನೆಯೊಳಗೆ ಬಳಸುವ ಪೊರಕೆ ಸವೆದು ಹಳತಾದಾಗ ಅದನ್ನು ಅಂಗಳ-ಬಚ್ಚಲು-ಹಿತ್ತಲುಗಳ ಕೆಲಸಕ್ಕೆ ಮೀಸಲಿಡುತ್ತೇವೆ; ಹತ್ತಿಯ ಬಟ್ಟೆಗಳು ಹಳತಾಗಿ ಹರಿದಾಗ ಮನೆಯ ನೆಲವನ್ನೊರೆಸಲು ಬಳಸುತ್ತೇವೆ. ಇಂಥ ಪರಿಪಾಟ ಇಂದಿಗೂ ಮತ್ತೆಷ್ಟೋ ಮನೆಗಳಲ್ಲಿ ಇರುವಂಥದ್ದೇ ಆಗಿದೆ. ಈ ಬಗೆಯ ವ್ಯವಸ್ಥೆಯು 'ನವಶಿಷ್ಟ'ರಿಗೂ (ಮಾಡ್) 'ಭದ್ರಲೋಕ'ದವರಿಗೂ (ಎಲೀಟ್) ಸ್ವಲ್ಪಮಟ್ಟಿಗೆ ಜುಗುಪ್ಸವಾಗಿ, ಅಸುಂದರ ವಾಗಿ ತೋರಬಹುದು. ಆದರೆ ಈ ತತ್ವವು ಬರಿಯ ಬಡತನ ಅಥವಾ ಮಿತವ್ಯಯದ ಪರಿಣಾಮವಲ್ಲ; ಇದರ ಹಿಂದೆ ಗಾಢವಾದ ಪ್ರಸುಪ್ತ ಪ್ರಕೃತಿಸಂತುಲನವಿವೇಕವಿದೆ. ಊರ್ಜಾನಿರ್ವಾಹದ (ಎನರ್ಜಿಮ್ಯಾನೇಜ್ ಮೆಂಟ್) ಪ್ರಣಾಲಿಯಿದೆಯೆಂಬುದನ್ನು ಬಹುಜನ ತಿಳಿದಿಲ್ಲ.

ಹೀಗೆ ಹೇಳುವಾಗ ನಮ್ಮ ಹಿರಿಯರ ಮಿತ ಬಳಕೆ, ಉಪಯೋಗಿತ ವಸ್ತುಗಳ ಮರುಬಳಕೆ ಮುಂತಾದವು ಪ್ರಕೃತಿಸಂತುಲನವಿವೇಕ ಎಂದು ಹೇಳುತ್ತಾರೆ. ನಾವಿಂದು ಅದನ್ನು ಸುಸ್ಥಿರ ಅಭಿವೃದ್ಧಿ ಎಂದೆನ್ನುತ್ತೇವೆ. ನಾವು ನಮಗೆಷ್ಟು ಬೇಕೊ ಅಷ್ಟೇ ಉಪಯೋಗಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಡುವುದೇ ಸುಸ್ಥಿರ ಅಭಿವೃದ್ಧಿ . ಬಳಸಿ ಎಸೆಯುವ ಕಲ್ಪನೆಯಲ್ಲಿ ಮಾಲಿನ ಕೊಳ್ಳುಬಾಕತನ ನಮ್ಮ ಬೇಕು ಬೇಡಗಳ ವಿವೇಚನೆಯ ಆಚೆಗೆ ಖರೀದಿ ಮಾಡಿಸುತ್ತವೆ. ಇದು ಸಲ್ಲದು. ನಮಗೆಷ್ಟು ಬೇಕು ಅಷ್ಟನ್ನೇ ಕೊಂಡು ಅದರ ಮರು ಬಳಕೆ, ಪುನರ್ ಬಳಕೆಗಳ ಮೂಲಕ ಕಸದಿಂದ ರಸ ಮಾಡುವ ಸಿದ್ಧಾಂತಕ್ಕೆ ಮರಳೋಣ, ಬಳಸಿ ಎಸೆಯುವ ಸಿದ್ದಾಂತಗಲ್ಲ.

ಹೀಗೆ ವಸ್ತು ಮತ್ತು ಮಾನವರಲ್ಲಿ ಮರುಬಳಕೆಗೆ ಮಹತ್ವಕೊಡೋಣ, ಬಳಸಿ ಎಸೆಯುವ ಸಿದ್ದಾಂತಗಲ್ಲ.

Article written by : 

- ರಶ್ಮಿ
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಮಂಗಳೂರು

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.