ಆಕೆಯ ಹೆಸರು ಸೋನಾ, ಅವಳ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲವು, ಅವಳ ಧ್ವನಿಯಂತು ಕೋಗಿಲೆಗಿಂತಲೂ ಮೀರಿದ್ದು. ಅವಳ ಮುತ್ತಿನಂತ ಮಾತುಗಳು ಎಲ್ಲರನ್ನು ಆಕರ್ಷಿಸುತ್ತಿತ್ತು. ತುಂಬಾ ಬುದ್ದಿವಂತೆ. ಶಾಲೆಯಲ್ಲಿ ಎಲ್ಲದರಲ್ಲೂ ಮುಂದು. ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು. ಕೇರಳದ ಒಂದು ಪುಟ್ಟ ಹಳ್ಳಿಯಲ್ಲಿ ರಾಜು ಮತ್ತು ಕಮಲ ಎಂಬುವವರು, ದಿನಾಂಕ 10/10/2000 ರಂದು ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟರು ಅವಳೇ ಈ ಸೋನಾ. ರಾಜು ಮದುವೆಗೆ ಮುಂಚೆ ಸುಮಾರು 5 ವರ್ಷ ಕೆಟ್ಟ ವ್ಯಕ್ತಿಗಳ ಸಹವಾಸ ಮಾಡಿ, ಅವರೊಡನೆ ಕುಡಿದು ತಿಂದು ದುಂದು ವೆಚ್ಚ ಮಾಡುತ್ತಿದ್ದ. ತುಂಬಾ ಶ್ರೀಮಂತನಾಗಿದ್ದ, ಹೀಗಿರುವಾಗ ಅವನಿಗೆ ಇದ್ದಕ್ಕಿದಂತೆ ಒಂದು ಒಳ್ಳೆ ಹುಡುಗಿಯನ್ನು ನೋಡಿ ಮದುವೆ ಮಾಡಿಕೊಂಡು ಸಂಸಾರದ ಜೀವನವನ್ನು ನಡೆಸುವ ಆಸೆ ಆಗುತ್ತದೆ. ಶ್ರೀಮಂತನಾಗಿದ್ದರಿಂದ ಒಂದು ಗುಣವತಿಯಾದ ಮಹಿಳೆಯನ್ನು ಮದುವೆಯಾದನು. ಇಬ್ಬರೂ ಅನ್ನ್ಯೋನ್ಯವಾಗಿ ಜೀವನ ನಡೆಸಿ ಎರಡು ವರ್ಷದ ನಂತರ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಅವಳ ಹೆಸರೇ ಸೋನಾ. ಸೋನಾಗೆ ತಮ್ಮ ಆಕಾಶ್ ಹುಟ್ಟಿದ. ಗಂಡು ಮಗು ಎಂದರೆ ಎಲ್ಲರಿಗೂ ಸಂತೋಷವೇ ಅಲ್ವೇ? ಇಲ್ಲಿ ಕೂಡ ಸಂಬ್ರಮ ಸಡಗರದಿಂದ ಅವನನ್ನು ಸ್ವಾಗತಿಸಿದರು. ಅಪ್ಪ ರಾಜುವಿಗೆ ಮಕ್ಕಳು ಅಂದರೆ ಪಂಚಪ್ರಾಣ. ಅವರನ್ನು ಪ್ರತಿಷ್ಠಿತ ಶಾಲೆಗೆ ಕಳುಹಿಸಿದ. ಮಕ್ಕಳು ಒಳ್ಳೆ ಜೀವನ ಮಾಡಬೇಕು ಎಂದು ದಿನಾಲೂ ನೀತಿ ಪಾಠ ಹೇಳುತ್ತಿದ್ದರು. ಒಂದು ದಿನ ಇದ್ದಕಿದ್ದಂತೆ ಆಕಾಶ್ ನನ್ನು ಆಸ್ಪತ್ರೆ ಗೆ ಕರೆದೊಯ್ಯಲಾಯಿತು. ಎಲ್ಲರೂ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದರು. ವೈದ್ಯರು ಎಲ್ಲರನ್ನು ಅವರ ಕೊಠಡಿಗೆ ಕರೆದು ಮೈ ಜುಮ್ಮೆನ್ನಿಸುವ ವಿಷಯಯೊಂದನ್ನು ಹೇಳಿದರು. "ಪಾಲಕರೇ, ನನ್ನನ್ನು ಕ್ಷಮಿಸಿ, ನಿಮ್ಮ ಮಗನು ಹೆಚ್ಐವಿ ರೋಗದಿಂದ ನರುಳುತ್ತ ಇದ್ದಾನೆ. ದಯವಿಟ್ಟು ಅವನ ಬಗ್ಗೆ ಹೆಚ್ಚು ಕಾಳಜಿ ವಹಿಸಿ", ಎಂದರು.

ತಂದೆ ತಾಯಿಗೆ ನುಂಗಲಾಗದ ತುತ್ತು ಇದಾಗಿತ್ತು. ಮಗನನ್ನು ಮನೆಯಲ್ಲೇ ಆರೈಕೆ ಮಾಡುತ್ತಿದ್ದರು. ಆಕಾಶ್ ನನ್ನು ಹೆಚ್ಚು ದಿನ ಉಳಿಸಿಕೊಳ್ಳಲಾಗಲಿಲ್ಲ. ಅವನು ಎಳೆ ವಯಸ್ಸಿನಲ್ಲೆ ಜೀವ ಬಿಟ್ಟ. ಇದನ್ನು ಕಂಡ ತಂದೆ ತಾನು ಮಾಡುತ್ತಿದ್ದ ಪಾಪದ ಕರ್ಮವನ್ನು ತನ್ನ ಹೆಂಡತಿಗೆ ಹೇಳಿ ಮಗನ ಸಾವಿಗೆ ನಾನೇ ಕಾರಣ ಎಂದು ಎದೆ ಬಡಿದು ಕೊಳ್ಳುತ್ತಿದ್ದ. ಕಮಲ ಇದನ್ನೆಲ್ಲ ಕೇಳಿ ಬಿಕ್ಕಿ ಬಿಕ್ಕಿ ಅಳ ತೊಡಗಿದಳು. ಅವಳಿಗೆ ಅವನ ಮೊದಲಿನ ಜೀವನದ ಬಗ್ಗೆ ಗೊತ್ತೇ ಇರಲ್ಲಿಲ್ಲ. ಈ ಚಿಂತೆಯಲ್ಲಿ ಅವನ ಆರೋಗ್ಯ ಹದಗೆಡತೊಡಗಿತು. ಗಂಡನನ್ನು ಕಾಪಾಡಲು ವೈದ್ಯರ ಬಳಿಗೆ ಕಮಲ ಕರೆದುಕೊಂಡು ಹೋದಳು. ಅವಳ ಎದೆಗೆ ಇನ್ನೊಂದು ಈಟಿ ತಿವಿದಂತಾಯಿತು. ಗಂಡನು ಕೂಡ ಎಚ್ಐವಿ ರೋಗದಿಂದ ನರಳುತ್ತಾ ಇದ್ದನು. ಅವನು ದಿನಾಲೂ ಮಾಡಿದ ಪಾಪಕ್ಕೆ ಪಶ್ಚಾತಾಪ ಪಡುತ್ತಾ ಅಳುತ್ತಾ ಇದ್ದ. ಕಡೆಗೂ ಕಮಲ ತನ್ನ ಗಂಡನನ್ನು ಕಳೆದು ಕೊಂಡಳು. ಅವನು ಸತ್ತ ನಂತರ ಅವನ ಮನೆಯವರು ಯಾರು ಕೂಡ ಕಮಲ ಅಥವಾ ಸೋನಾರನ್ನು ನೋಡಲು ಬರಲಿಲ್ಲ. ಮಗಳು ಸೋನಾ ಇಪ್ಪತ್ತೊಂದು ವರ್ಷದವಳಾಗಿದ್ದಳು. ಅವಳನ್ನು ಉನ್ನತ ಶಿಕ್ಷಣಕ್ಕೆ ಬೆಂಗಳೂರಿಗೆ ಕಳುಹಿಸಿದರು. ಕಮಲ ಗಂಡ ಮಾಡಿದ ತಪ್ಪನ್ನು ನೆನೆದು ದಿನಾಲೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಾ ಇದ್ದಳು. ಇದೇ ಕೊರಗಿನಲ್ಲಿದ್ದ ಕಮಲಳ ಆರೋಗ್ಯವೂ ಕೂಡ ಹದಗೆಡುತ್ತ ಬಂದಿತು. ಸೋನಾಗೆ ಇಪ್ಪತ್ತಾಮೂರು ವರ್ಷಕ್ಕೆ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಕೈತುಂಬಾ ಸಂಬಳ ಕೊಡುವ ಕೆಲಸ. ಈ ಸುದ್ದಿಯನ್ನು ಅಮ್ಮನಿಗೆ ಹೇಳುವ ಕುತೂಹಲದಿಂದ ಮನೆಗೆ ಬಂದಳು ಸೋನಾ. ಅಮ್ಮನ ಆರೋಗ್ಯವನ್ನು ನೋಡಿ ಗಾಬರಿಗೊಂಡಳು. ಅಮ್ಮನನ್ನು ಅಂದೇ ಆಸ್ಪತ್ರೆಗೆ ಕರೆದೊಯ್ದಳು. ಸಂತೋಷದಿಂದಿದ್ದ ಸೋನಾಗೆ ವೈದ್ಯರು ಅಘಾತಕಾರಿ ಸುದ್ದಿ ಕೊಟ್ಟರು. ಕಮಲಳ ವೈದ್ಯಕೀಯ ವರದಿ ಕೂಡಾ ಹೆಚ್ಐವಿ ಪಾಸಿಟೀವ್ ಆಗಿತ್ತು. ಇವಳು ಕಷ್ಟಪಟ್ಟು ಕೆಲಸ ಮಾಡಿ ಅಮ್ಮನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆ ಇತ್ತು ಆದರೆ, ದೇವರ ಚಿತ್ತ ಬೇರೇನೇ ಇತ್ತು. ಅಮ್ಮನನ್ನು ಕೂಡ ಕಳೆದು ಕೊಂಡು ತಬ್ಬಲಿಯಾದ ಸೊನಾಗೆ, ದೊಡ್ಡಪ್ಪನೇ ತಂದೆ ತಾಯಿಯಾದರು. ಅವಳಿಗೆ ದೈರ್ಯ ತುಂಬಿ ಒಳ್ಳೆ ಜೀವನವನ್ನ ಮಾಡಲು ಹೇಳುತ್ತಾ ಇದ್ದರು.

ಕೆಲಸಕ್ಕೆ ಸೇರುವ ಮೊದಲು ವೈದ್ಯಕೀಯ ವರದಿ ಬೇಕಾಗಿತ್ತು. ಬೆಳಿಗ್ಗೆ ಆಸ್ಪತ್ರೆಗೆ ಬಂದು ಎಲ್ಲಾ ಪರೀಕ್ಷೆ ಮಾಡಿಸಿದಳು. ಸಂಜೆ ಅವಸರದಲ್ಲಿಯೇ ಆಸ್ಪತ್ರೆಗೆ ಬಂದಳು ಸೋನಾ, ಅಲ್ಲೆ ಆಸ್ಪತ್ರೆಯ ಮೂಲೆಯಲ್ಲೇ ಸ್ವಲ್ಪ ಸಮಯ ಕಳೆದಳು. ವೈದ್ಯರನ್ನ ಭೇಟಿಯಾಗಲು ಮನಸ್ಸು ಒಪ್ಪಲಿಲ್ಲ , ಅವರನ್ನ ಭೇಟಿಯಾಗದೆ ಹಾಗೆ ಹೊಗುವ ಹಾಗಿಲ್ಲ. ಹೇಗೋ ಮನಸ್ಸಿಗೆ ಧೈರ್ಯ ತೆಗೆದುಕೊಂಡು ಬಿಸಿ ಉಸಿರು ಬಿಡುತ್ತ, ವೈದ್ಯರ ಕಚೇರಿಗೆ ಹೆಜ್ಜೆ ಇಟ್ಟಳು. ವೈದ್ಯರು ಅವಳನ್ನು ನಗುನಗುತ್ತಾ ಸ್ವಾಗತಿಸಿದರು. ಅವರ ಮುಗುಳ್ನಗೆ ನೋಡಿ ಎಲ್ಲ ವೈದ್ಯಕೀಯ ವರದಿ ಸರಿ ಇದೆ ಎಂದು ಮನಸ್ಸು ಹಗುರಮಾಡಿಕೊಂಡಳು. ಆದರೆ ಅವಳ ವರದಿ ಅವಳು ಅಂದುಕೊಂಡ ಹಾಗೆ ಇರಲಿಲ್ಲ. 'ನಾನೊಂದು ಬಗೆದರೆ ದೈವ ಒಂದು ಬಗೆದಂತೆ' ಎಂಬ ಹಾಗೆ. ವೈದ್ಯರು ತಡ ಮಾಡದೆ ಅವಳ ವರದಿಯನ್ನು ಮುಂದಿಟ್ಟು, "Dear Sona, I am sorry to say…. you are diagnosed as HIV positive". ಸೋನಾಗೆ ಲೋಕವೇ ಮುಳುಗಿ ಹೋಯ್ತು ಅನ್ನೋ ಹಾಗೆ ಆಯ್ತು, ಹೃದಯ ಒಡೆದಂತ್ತಾಯಿತು, ಪಕ್ಕೆಗೆ ಯಾರೋ ಈಟಿಯಿಂದ ತಿವಿದಂತ್ತಾಯಿತು. ಕಣ್ಣಲ್ಲಿನ ನೀರು ಬಿಟ್ಟರೆ ಬೇರೆ ಯಾರೂ ಅವಳ ಜೊತೆ ಇರಲಿಲ್ಲ. ಅವಳ ದೊಡ್ಡಪ್ಪ ಆಸ್ಪತ್ರೆಗೆ ಬಂದು ಅವಳನ್ನು ತಬ್ಬಿಕೊಂಡು, ದೇವರು ನಿನ್ನನ್ನೂ ಬಿಡಲಿಲ್ಲವ ತಾಯಿ, ಎಂದು ಅಳತೊಡಗಿದರು. ಸೋನಾಗೆ ಕಣ್ಣೀರು ಬರ್ತಿತ್ತು. ನಂತರ ಅಂದೇ ಅವಳ ದೊಡ್ಡಪ್ಪ ಅವಳನ್ನು ಬೆಂಘಲೂರಿನ ’ಸ್ನೇಹದಾನ್’ ಎಂಬ ಎಚ್ಐವಿ ರೋಗಿಯ ಕರೆದು ಕೊಂಡು ಬಂದು ಅವಳನ್ನು ಅಲ್ಲಿಯೇ ಬಿಟ್ಟು ಮನೆಗೆ ಹಿಂತಿರುಗಿದರು. ಸೋನಾಗೆ ಎಲ್ಲವೂ ಮುಗಿಯಿತು, ಆಸೆಗಳೆಲ್ಲ ನುಚ್ಚು ನೂರಾಗಿವೆ, ಇನ್ನೂ ಯಾರಿಗಾಗಿ ಉಳಿದಿರಬೇಕು ಎಂದು ಅನಿಸಿತು. ರಾತ್ರಿ ಎಲ್ಲ ಎಚ್ಚರವಿದ್ದು ಜೀವವನ್ನು ಕಳೆದು ಕೊಳ್ಳಲು ನಿರ್ಧರಿಸಿದಳು. ಬೆಳಿಗ್ಗೆ ಮೂರು ಗಂಟೆ ಸುಮಾರಿಗೆ ಎಲ್ಲರ ಕಣ್ಣು ತಪ್ಪಿಸಿ ಎರಡನೇ ಮಹಡಿಯ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಬೇಕೆಂದು ಹೊರಟಳು. ಒಂದು ನಿಮಿಷ ಕೂಡ ಯೋಚನೆ ಮಾಡದೆ ಅಲ್ಲಿಂದ ನೆಗೆದು ಬಂಡೆಯ ಮೇಲೆ ಬಿದ್ದಳು. ಅಲ್ಲಿಯೂ ದೇವರ ಚಿತ್ತವು ಬೇರೆಯೇ ಇತ್ತು ಅವಳು ಅಂದು ಕೊಂಡ ಹಾಗೆ ಆಗಲಿಲ್ಲ. ಬಿದ್ದವಳು ಇನ್ನೂ ಜೀವಂತವಾಗಿದ್ದರೂ ಮೇಲೆ ಏಳುವ ಶಕ್ತಿ ಅವಳಿಗಿಲ್ಲದಂತಾಗಿತ್ತು. ಕಾರಣ ಅವಳ ಬೆನ್ನು ಮೂಳೆ ಮುರಿದಿತ್ತು. ನೆನೆಸಿಕೊಂಡರೆ ಮೈ ಎಲ್ಲ ನಡುಕ ಸೃಷ್ಟಿ ಆಗುತ್ತದೆ.

ಇವಳ ನಿಜ ಜೀವನದ ಕಥೆಯು ಕೇಳುವವರ ಮನಕಲುಕುತ್ತದೆ. ಇವಳ ಕಾಯಿಲೆಗೆ ಕಾರಣವಾದರೂ ಏನು? ಅದನ್ನು ನೆನೆದು ಉಪಯೋಗವಿಲ್ಲ, ಆದರೆ ಆ ರೋಗವನ್ನು ತಡೆಗಟ್ಟಲು ನಮ್ಮಿಂದ ಸಾಧ್ಯ. ಆ ರೋಗಿಯ ನೋವು ಕೇಳಲು ನಮ್ಮಿಂದ ಸಾಧ್ಯ. ಅವಳಿಗೆ ಎಚ್ಐವಿ ಅಂತ ತಿಳಿದಾಗ, ಸಮಾಜ ಅವಳನ್ನು ನೋಡಿದ ರೀತಿಯೇ ಬೇರೆ. ಅವಳ ಸಂಬಂಧಿಕರೇ ಅವಳನ್ನು ಆರಿತುಕೊಳ್ಳಲಿಲ್ಲ, ಬದಲಾಗಿ ಅವಳನ್ನು ಸ್ನೇಹದಾನ್ ಏಚ್ಐವಿ ಕೇಂದ್ರಕ್ಕೆ ಸೇರಿಸಿದರು. ಅವಳಿಗೆ ಹಗಲು ರಾತ್ರಿ ಹೆಗಲು ಕೊಟ್ಟು ಅವಳ ಯೋಗ ಕ್ಷೇಮವನ್ನು ನೋಡಿಕೊಳ್ಳುತ್ತಿರುವ ಸ್ನೇಹದಾನ್ (Home of Love and Care - Run by a religious institute founded by St. Camillus de Lellis) ಸಂಸ್ಥೆಗೆ ನನ್ನದೊಂದು ಸಲಾಮು. ಇವರಿಗೆ ನಾವು ಎಷ್ಟೆ ವಂದನೆಗಳನ್ನು ಹೇಳಿದರೂ ಸಾಲದು.

ಸೋನಾಳಿಗೆ ಅಲ್ಲಿರುವಂತ ಫಾದರ್ಸ್, ಸಿಸ್ಟರ್ಸ್ ಮತ್ತು ವೈದ್ಯರು ದೈರ್ಯತುಂಬಿ ಮರು ಜೀವವನ್ನಿತ್ತರು. ಅವಳ ಈ ಸ್ಥಿತಿಗೆ ಕಾರಣಕರ್ತನಾದ ಅವಳ ತಂದೆಗೆ, ಗುರುಹಿರಿಯರು ತಿದ್ದಿ ಬುದ್ದಿ ಹೇಳಿದ್ದಿದ್ದರೆ ಇಂದು ಸೋನಾಳಿಗೆ ಈ ಸಮಸ್ಸೆ ಬರುತ್ತಿರಲಿಲ್ಲ. ಆದರೆ ಸತ್ತ ತಂದೆಯನ್ನು ಬೈಯ್ಯುವುದು ಏಷ್ಟು ಸರಿ? ಅದರ ಬದಲಾಗಿ ನಾವು ನಮ್ಮಿಂದ ಆದಷ್ಟು ಎಚ್ಐವಿ ರೋಗಿಗಳನ್ನು, ಅವರು ನಮ್ಮಂತೆಯೇ ಮನುಷ್ಯರು, ಅವರಿಗೂ ಸಮಾಜದಲ್ಲಿ ಬಾಳುವ ಹಕ್ಕಿದೆ ಎಂಬುವುದನ್ನು ಅರಿತು ಅವರಿಗೆ ಸಹಾಯ ಹಸ್ತ ನೀಡೋಣ. ನಾವು ಈ ಕ್ಷಣದಲ್ಲಿ ಸ್ನೇಹದಾನ್ ಸಂಸ್ಥೆಯ ಬಗ್ಗೆ ತಿಳಿದುಕೊಳ್ಳೋಣ. ಸ್ನೇಹದಾನ್ ಸಂಸ್ಥೆಯು ಎಚ್ಐವಿ ರೋಗಿಗಳಿಗೆ ಒಂದು ಸಮುದಾಯ ಆರೈಕೆ ಕೇಂದ್ರವಾಗಿದೆ, ಇದನ್ನು ಕ್ಯಾಮಿಲಿಯನ್ಸ್ ಸಭೆಗೆ ಸೇರಿದ ಫಾದರ್ಸ್ ಮತ್ತು ಸಿಸ್ಟರ್ಸ್ ನವರು ನಡೆಸುತ್ತಾ ಇದ್ದಾರೆ. ಇಂದೊಂದು ಅಂತರರಾಷ್ಟ್ರೀಯ ನಂಬಿಕೆ ಆಧಾರಿತ ಸಂಸ್ಥೆಯಾಗಿದೆ. ಇಂತಹ ಕೇಂದ್ರಗಳಿಗೆ ಬೆಂಬಲ ನೀಡುವ ಮೂಲಕ ಹಾಗೂ ಜನರಿಗೆ ಹೆಚ್ಐವಿ ಕುರಿತು ಮಾಹಿತಿ ನೀಡುವ ಮೂಲಕ ಸಮಾಜದ ಜನರನ್ನು ಈ ಮಾರಕ ಕಾಯಿಲೆಯಿಂದ ರಕ್ಷಿಸೋಣ. ನೊಂದವರ ಕಣ್ಣೀರು ಒರೆಸುವ ಕೈ ನನ್ನ ನಿಮ್ಮದಾಗಲಿ. 

About the Author : 

Harish Kumar is a student of 2nd year B.Ed. at St. Aloysius Institute of Education, Mangaluru.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.