ಯಶಸ್ಸುನ್ನು ನಾವು ಹೇಗೆ ಸಾಧಿಸಬಹುದು? ಯಶಸ್ಸು ನಾವಿದ್ದಲ್ಲಿಗೆ ಹುಡುಕಿಕೊಂಡು ಬರುವುದಿಲ್ಲ , ಬದಲಾಗಿ ಅದರ ಹಿಂದೆ ನಾವೇ ಹೋಗಿ ಪಡೆಯಬೇಕು. ಅದನ್ನು ಪಡೆಯಬೇಕೆಂದರೆ ಪ್ರಯತ್ನ ಮುಖ್ಯ. ಯಶಸ್ಸಿನ ಮೊದಲ ಹೆಜ್ಜೆಯೇ ಪ್ರಯತ್ನ. ಈ ಪ್ರಯತ್ನ ಹೇಗಿರಬೇಕೆಂದರೆ ನಾವು ಮಾಡುವ ಕೆಲಸ ಯಾವುದೇ ಆಗಿರಲಿ, ಅದು ಚಿಕ್ಕ ಕೆಲಸ ಆಗಿರಬಹುದು, ದೊಡ್ಡ ಕೆಲಸ ಆಗಿರಬಹುದು , ಮೊದಲು ನಾವು ಆ ಕೆಲಸವನ್ನು ಪ್ರೀತಿಸಬೇಕು. ಪ್ರೀತಿಸಿದ ನಂತರ ಹಿಡಿದುಕೊಂಡಿರುವ ಕೆಲಸವನ್ನು ಪ್ರಾರಂಭಿಸಬೇಕು. ಕೆಲಸದಲ್ಲಿ ಪ್ರೀತಿ ಇದ್ದರೆ ಮಾತ್ರ ನಮಗೆ ಆ ಕೆಲಸದ ಬಗ್ಗೆ ಆಸಕ್ತಿ ಮೂಡುತ್ತದೆ. ನಂತರ ಆ ಕೆಲಸದ ಬಗ್ಗೆ ಪ್ರಯತ್ನ ಪಡಬೇಕು.

ನಾವು ಶಾಲೆಗೆ ಸೇರುವಾಗ ತರಗತಿ ಹಂತದಲ್ಲಿ , ಒಂದು ಹಂತಕ್ಕೆ ತಲುಪಿದ ನಂತರ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಯಾವುದೇ ಒಂದು ಕೋರ್ಸನ್ನು ಆಯ್ಕೆ ಮಾಡಿಕೊಂಡಿರುತ್ತೇವೆ. ಅದರಲ್ಲಿ ನಾವು ಉದಾಹರಣೆಗೆ ಎಸ್ ಎಲ್ ಸಿ ಹಂತದಲ್ಲಿ ಕನ್ನಡ ಆಗಿರಬಹುದು, ಸಂಸ್ಕೃತ ಆಗಿರಬಹುದು , ಹೀಗೆ ಯಾವುದಾದರೂ ಒಂದು ವಿಷಯವನ್ನು; ಹಾಗೆ ಪಿಯುಸಿ ವೇಳೆಗೆ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಯಾವ ವಿಷಯ ಮುಖ್ಯವೋ ಅದನ್ನೇ ಪಿಯುಸಿಯಲ್ಲಿ ತೆಗೆದುಕೊಂಡಿರುತ್ತೇವೆ. ಅದೇ ರೀತಿ ಡಿಗ್ರಿಯಲ್ಲಿ ನಾವು ಅದೇ ವಿಷಯಕ್ಕೆ ನಾವು ಕೋರ್ಸನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಮುಖ್ಯವಾಗಿ ಇಲ್ಲಿ ನಾವು ಯಾವುದೇ ಒಂದು ತರಗತಿಯಲ್ಲಿ ಕಲಿಯುತ್ತಿರುವಾಗ ನಮಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಸಿಕ್ಕಿದೆ ಎಂದು ನಾವು ಅದನ್ನು ನಕಾರಾತ್ಮಕವಾಗಿ ಮನಸ್ಸಿಗೆ ತೆಗೆದುಕೊಳ್ಳುತ್ತೇವೆ. ನಮ್ಮಿಂದ ಹೆಚ್ಚು ಅಂಕ ಮತ್ತೊಬ್ಬರಿಗೆ ಸಿಗುವಾಗ ಅವರು ನಮ್ಮನ್ನು ಹೀಯಾಳಿಸುವಾಗ, ಅದು ನಮ್ಮ ಕೈಯಿಂದ ಸಾಧ್ಯ ಇಲ್ಲ ಎಂದು ನಾವು ಅಲ್ಲೇ ಕೊರಗುತ್ತೇವೆ. ಅವರು ಹೇಳಿದ್ದನ್ನು ನಾವು ತಲೆಗೆ ಜಾಸ್ತಿ ಹಾಕಿಕೊಂಡು, ಅವರು ಹೇಳಿದ ಮಾತು "ನಿಮ್ಮಿಂದಾಗದು" ಎಂಬ ಮಾತನ್ನು ನಾವು ತಲೆಗೆ ಹೆಚ್ಚಾಗಿ ಹಾಕಿಕೊಂಡಿರುತ್ತೇವೆ. ನಾವು ಯಾವ ವಿಷಯದಲ್ಲಿ ಧನಾತ್ಮಕವಾಗಿ ಯೋಚನೆ ಮಾಡಬೇಕು ಅದರಲ್ಲಿ ನಾವು ಯೋಚನೆ ಮಾಡುವುದಿಲ್ಲ. ನಕಾರಾತ್ಮಕವಾಗಿ ಯೋಚನೆ ಮಾಡಿದರೆ ಯಾವುದು ಸಾಧ್ಯವಿಲ್ಲ. ಅಲ್ಲದೆ , ಮತ್ತೊಬ್ಬರ ಮಾತಿಗೆ ನಾವು ಕಿವಿ ಕೊಡಬಾರದು, ಹೀಗೆ ಯಾವುದನ್ನೂ ನಾವು ಅಸಾಧ್ಯವಾದದ್ದು ಎಂದು ಅಂದುಕೊಳ್ಳಬಾರದು. ಅಸಾಧ್ಯವಾದದ್ದು ಯಾವುದು ಇಲ್ಲ. ಆತ್ಮವಿಶ್ವಾಸ ಮತ್ತು ಪ್ರಯತ್ನವಿದ್ದರೆ ಜಗವನ್ನೇ ಗೆಲ್ಲುವ ಹುಮ್ಮಸ್ಸು, ಉತ್ಸಾಹ ನಮ್ಮಲ್ಲಿ ಬೆಳೆಯುವುದು. ಯಾವುದು ಕಷ್ಟ ಅಂತ ಅನಿಸುತ್ತದೆ ಅದನ್ನು ನಾವು ಆಸಕ್ತಿಯಿಂದ, ಏಕಾಗ್ರತೆಯಿಂದ, ಆತ್ಮವಿಶ್ವಾಸದಿಂದ ಅಥವಾ ಆತ್ಮಸ್ಥೈರ್ಯದಿಂದ ಮಾಡಿದರೆ ಯಾವುದು ನಮ್ಮ ಕೈಯಿಂದ ಆಗದು ಎಂಬ ಮಾತೆ ಬರಲ್ಲ. ಮನುಷ್ಯನಿಗೆ ಇಲ್ಲಿ ನಾವು ಯಾವ ಉದ್ದೇಶದಿಂದ ಅಥವಾ ಯಾವುದನ್ನು ಸಾಧಿಸಬೇಕೆಂಬ ಗುರಿಯನ್ನು ಇಟ್ಟುಕೊಂಡಿರುತ್ತೇವೆ, ಆ ಸಾಧನೆ ಮಾಡುವ ಮನಸ್ಸಿರಬೇಕು. ಬರಿ ಮನಸ್ಸು ಇದ್ದರೆ ಆಗುವುದಿಲ್ಲ, ಬದಲಾಗಿ ಹೆಚ್ಚು ಹೆಚ್ಚು ಪ್ರಯತ್ನ ಇರಬೇಕು. ನಾವು ಹೆಚ್ಚು ಹೆಚ್ಚು ಪ್ರಯತ್ನ ಮಾಡುತ್ತೇವೆ ಎಂದು ಗಟ್ಟಿ ಮನಸ್ಸಿರಬೇಕು, ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿರಬೇಕು. ಯಾರಾದರೂ ನಮಗೆ "ನಿನ್ನಿಂದಾಗದು" ಎಂಬ ಮಾತನ್ನು ಹೇಳಿದ್ದಾರೆ ಎಂದು ಹಾಗೆ ನಾವು ಕೈ ಕಟ್ಟಿ ಕುಳಿತುಕೊಳ್ಳಬಾರದು. ಬದಲಾಗಿ ಹೇಳಿದವರ ಮುಂದೆ ಗುರಿಯನ್ನು ಇಟ್ಟುಕೊಂಡು, ಅವರ ಮಾತನ್ನೇ ಆಳವಾಗಿ ತೆಗೆದುಕೊಂಡು, ಅದರ ಮೇಲೆ ಕಣ್ಣಿಟ್ಟು ಪ್ರಯತ್ನ ಪಡಬೇಕು. ಆಗ ನಮಗೆ ಛಲ ಬರುತ್ತದೆ, ನಾನು ಹಿಡಿದಿರುವ ಕೆಲಸವನ್ನು ಯಾವುದೇ ರೀತಿಯಲ್ಲಿ ಎಷ್ಟೇ ಕಷ್ಟ ಆದರೂ ಮಾಡಿಯೇ ತೀರುತ್ತೇನೆ ಎಂಬ ಧೈರ್ಯ ಬರುತ್ತದೆ.

ಇದಕ್ಕೆ ಸಂಬಂಧಪಟ್ಟಂತೆ ನಾವು ಕೆಲವು ಉದಾಹರಣೆಯನ್ನು ನೋಡಬಹುದು. ಒಂದು ಕಲ್ಲು ಮೊದಲು ಯಾವ ಆಕಾರದಲ್ಲಿ ಇರುತ್ತದೆ ನೀವು ತಿಳ್ಕೊಂಡಿದ್ದೀರಿ. ಆದರೆ ಅದೇ ಕಲ್ಲನ್ನು ಒಂದು ಆಕಾರಕ್ಕೆ ಬರುವಂತೆ ಮಾಡುವ ಶಿಲ್ಪಿಗಳನ್ನು ನೀವು ನೋಡಿದ್ದೀರಿ. ನೋಡಿ, ಅವರು ಎಷ್ಟೋ ಕಷ್ಟಪಡುತ್ತಾರೆ. ಈ ಕಲ್ಲನ್ನು ಹಾಗೆ ಬಿಟ್ಟು, ನನ್ನಿಂದಾಗದೆಂದು ಶಿಲ್ಪಿ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಹಾಗೆ ಕುಳಿತುಕೊಳ್ಳುತ್ತಿದ್ದರೆ ಆ ಕಲ್ಲಿಗೆ ಆಕಾರ ಬರುತ್ತಿರಲಿಲ್ಲ. ಎಷ್ಟೇ ಕಷ್ಟ ಬಂದರೂ ಆ ಕಲ್ಲಿಗೆ ಆಕಾರ ನೀಡಲು ಆಗುವುದಿಲ್ಲ, ಹಲವಾರು ಕಲ್ಲುಗಳನ್ನು ಕೆತ್ತಿದರೂ ಆಕಾರವೇ ಬರುವುದಿಲ್ಲ, ಆದರೂ ಸತತ ಪ್ರಯತ್ನ ಮಾಡಿ ಕೊನೆಗೆ ಕಲ್ಲುಗಳನ್ನು ಕೆತ್ತಿ ಸುಂದರವಾದ ಮೂರ್ತಿಯನ್ನು ಮಾಡುವುದನ್ನು ನೀವು ನೋಡಿದ್ದೀರಿ. ಅದು ಹೇಗೆ ಆಕಾರಕ್ಕೆ ಬರುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ಶಿಲ್ಪಿಯು ಪ್ರಯತ್ನ ಪಡದಿದ್ದರೆ ಅದು ಹಾಗೆ ಉಳಿದಿರುತ್ತಿತ್ತು. ಏಕೆಂದರೆ ಅವನು ಕಲ್ಲುಗಳನ್ನು ಪ್ರಯತ್ನ ಮಾಡಿ ಅದನ್ನು ಒಂದು ಮೂರ್ತಿಯ ರೂಪಕ್ಕೆ ತಂದಿರುವುದನ್ನು ತಿಳಿದುಕೊಳ್ಳಬಹುದು. ಹಾಗೆ ಪ್ರಯತ್ನ ಪಟ್ಟರೆ ಯಾವುದನ್ನು ಮಾಡಲಿಕ್ಕೂ ಸಾಧ್ಯ . ಪ್ರಯತ್ನಪಟ್ಟು, ನಾವು ಸೋಲುತ್ತೇವೆ ಎಂದು ಅದನ್ನು ನಿರ್ಲಕ್ಷ ಮಾಡಬಾರದು , ಮತ್ತೆ ಪ್ರಯತ್ನ ಮಾಡಬೇಕು. ಆಗ ನಮ್ಮ ಗುರಿ ಆಸೆ ಆಕಾಂಕ್ಷೆ ಈಡೇರುತ್ತದೆ. ಹೀಗೆ ಪ್ರಯತ್ನ ಪಟ್ಟರೆ ಯಶಸ್ಸು ಸಾಧಿಸಲು ಸಾಧ್ಯ. ಆದ್ದರಿಂದ ಯಾವತ್ತೂ ನಾವು ಪ್ರಯತ್ನ ಪಡುವುದನ್ನು ಬಿಡಬಾರದು. ಈಗ ನೋಡಿದರೆ ನಮ್ಮನ್ನ ಸೋಲಿಸಲಿಕ್ಕೆ ಅಂತ ನೋಡುವಂಥ ಕೆಲವು ಜನರಿದ್ದಾರೆ. ಒಬ್ಬರು ಒಳ್ಳೆಯವರಾಗಲು ಅವರು ಬಿಡುವುದಿಲ್ಲ. ಇದು ಇತ್ತೀಚೆಗೆ ಮುಂದುವರೆದುಕೊಂಡು ಹೋಗಿದೆ . ನಾವು ನಮ್ಮ ಗುರಿಯನ್ನು ಸಾಧಿಸುವಾಗ, ನಮ್ಮ ಬಗ್ಗೆ ನಾವೇ ಕೆಟ್ಟ ಭಾವನೆಯನ್ನು ಇಟ್ಟುಕೊಳ್ಳಬಾರದು. ಬದಲಾಗಿ ಪ್ರಯತ್ನ ಪಟ್ಟು, ಸೋತರು ಪರವಾಗಿಲ್ಲ, ಬದುಕಿನಲ್ಲಿ ಪ್ರಯತ್ನ ಮುಖ್ಯ, ಫಲಿಸುವುದು ಆನಂತರ ಎಂಬುದನ್ನು ಅರಿತುಕೊಳ್ಲಬೇಕು. ಒಂದು ವೇಳೆ ಪ್ರಯತ್ನ ಪಟ್ಟು ಸೋತರೆ ಅದಕ್ಕೆ ಚಿಂತಿಸುವ ಅಗತ್ಯವಿಲ್ಲ. ಪ್ರಯತ್ನಪಟ್ಟರೆ ಗೆಲುವು ನಮ್ಮದಾಗುವುದು. ಆದರೆ ಯಾವತ್ತೂ ಅಡ್ಡ ದಾರಿಯನ್ನು ಹಿಡಿದು ಪ್ರತಿಫಲವನ್ನು ಬಯಸುವುದು ಸರಿಯಲ್ಲ, ಅದರಿಂದ ಸಿಕ್ಕಿದ ಗೆಲುವು ನಿಜವಾದ ಗೆಲುವಲ್ಲ.

ಕೆಲವರು ಹಣೆಬರಹದ ವಿಷಯವನ್ನು ತೆಗೆದುಕೊಳ್ಳುತ್ತಾರೆ. ನಾವು ಅಂದುಕೊಂಡದ್ದು ಎಲ್ಲಾ ಹಣೆಬರದಂತೆ ನಡೆಯುತ್ತದೆ ಎಂದು ಅದನ್ನು ತಿಳಿದುಕೊಂಡು, ಪ್ರಯತ್ನ ಪಟ್ಟರೂ ಪಡದಿದ್ದರೂ ಹಣೆಬರಹದಂತೆ ಆಗುತ್ತದೆ ಎಂದು ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಹೀಗೆ ಕೆಲವೊಂದು ಕಾರ್ಯವನ್ನು ನಾವು ಮಾಡಲು ಹೊರಟಾಗ, ಆ ಕಾರ್ಯ ಕಷ್ಟ ನೀಡಬಹುದು , ನೂರು ಜನರ ಮಾತಿಗೂ, ನೋಟಕ್ಕೂ ಬಲಿಯಾಗಬಹುದು; ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ದುಃಖಗೊಳ್ಳುವುದಕ್ಕಿಂತ , ಸತತ ಪ್ರಯತ್ನ ಪಟ್ಟು, ಒಮ್ಮೆ ಪ್ರಯತ್ನ ಪಟ್ಟು ಸೋತರೂ, ಸತತ ಪ್ರಯತ್ನಕ್ಕೆ "ಸಾಧನ" ಮಂತ್ರ ಎಂಬಂತೆ ಮುಂದುವರಿಯಬೇಕು. ಪ್ರಯತ್ನ ಪಟ್ಟದ್ದು ವ್ಯರ್ಥವಾಗುತ್ತದೆ ಎಂಬುದನ್ನು ಮನಸ್ಸಿನಿಂದ ಅಳಿದುಹಾಕಬೇಕು. ಎಲ್ಲಾ ಕೆಟ್ಟ ಭಾವ, ಕಠಿಣ ಪರಿಸ್ಥಿತಿಯನ್ನು ಎದುರಿಸಿ , ಶ್ರಮ ಪಟ್ಟು, ಆ ಪ್ರಯತ್ನದಿಂದಲೇ ಯಶಸ್ಸು ಸಾಧಿಸುವುದು ಮುಖ್ಯವಾಗಿದೆ . ಆದ್ದರಿಂದ ಯಶಸ್ಸಿನ ಮೊದಲ ಹೆಜ್ಜೆ ಪ್ರಯತ್ನ ಪಡುವುದು ಹಾಗೂ ಪ್ರಯತ್ನ ಪಟ್ಟರೆ ಯಶಸ್ಸು ಖಂಡಿತವಾಗ್ಲೂ ಸಾಧ್ಯ ಎಂಬುದನ್ನು ತಿಳಿದುಕೊಳ್ಳಬಹುದು.

ಲೇಖಕರ ಬಗ್ಗೆ ...

 

ಸುಮಿತ್ರ ಬಿ
ದ್ವಿತೀಯ ಬಿ. ಎಡ್.
ಸಂತ ಅಲೋಷಿಯಸ್ ಶಿಕ್ಷಣ ತರಬೇತಿ ಸಂಸ್ಥೆ, ಮಂಗಳೂರು

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.