ಜೀವನದ ಅತಿ ಸುಂದರ ಕ್ಷಣಗಳು ಯಾವುವು? ಎಂದು ನಾವು ಯೋಚಿಸಿದಾಗ ನಮ್ಮ ನೆನಪಿನ ಅಂಗಳದ ಪರದೆಯ ಮೇಲೆ ಮೂಡುವುದೇ ಬಾಲ್ಯ ಜೀವನದ ಆ ಸುಂದರ ಕ್ಷಣಗಳು. ನಮಗೆ ಕಾಣುವ ಪ್ರತಿಯೊಬ್ಬ ವ್ಯಕ್ತಿ,,ವಸ್ತು ,ಎಲ್ಲವೂ ವಿಶೇಷವೇ. ಓಡಿ -ಆಡಿ ಕುಣಿದು ಕುಪ್ಪಳಿಸಿದರು ದಣಿವರಿಯದ ಕಾಲ. ನಕ್ಕಾಗ ಎಲ್ಲರ ನಗುವಿಗೆ ಕಾರಣವಾಗುವ, ಅತ್ತಾಗ ಸಂಭಾಳಿಸಿ ಸಮಾಧಾನ ಪಡಿಸಲು ಪರಿಸರವೇ ಸೇರುವ ಆ ಪ್ರಪಂಚ ಕಳೆದು ಹೋದರೂ ನೆನಪುಗಳು ಮಾತ್ರ ನೆನಪಿನಂಗಳದಲ್ಲಿ ಹಾಗೆ ಉಳಿದವು.

ನನಗೆ ಸದಾ ಕಾಡುವ ನೆನಪು ಅಂದರೆ ನನ್ನ ಬಾಲ್ಯದ ಜೀವನದ ಕ್ಷಣಗಳು ನೆನಪು ಮಾಡಿಕೊಂಡರೆ ಮೈ ಜುಮ್ಮೆನಿಸುತ್ತದೆ. ಏಕೆಂದರೆ ಆ ಕ್ಷಣ ಈಗ ಸಿಗಲಾರದು. ಅಂದಿನ ದಿನಗಳಲ್ಲಿ ನಾನು ಆಡಿದ ಆಟ -ಪಾಠಗಳು ಅವು ಗೆಳೆಯರ ಸಂಗಡ ಆಡಿದ ಕುಂಟಬಿಲ್ಲೆ, ಲಗೋರಿ, ಹುಲಿ ಮತ್ತು ನರಿ ಆಟಗಳು ಇಂದಿಗೂ ನನ್ನ ಕಣ್ಣ ಮುಂದೆ ಕಾಣುತ್ತವೆ ಮತ್ತು ನನ್ನ ಗೆಳತಿಯರ ಜೊತೆ ಕೂಡಿ ನಮ್ಮ ಊರಿನ ಕೆರೆ, ಹೊಲ, ತೋಟಗಳಲ್ಲಿ ಆಡಿದ ನೆನಪು ಮತ್ತು ಅವುಗಳನ್ನು ಕಣ್ಣು ತುಂಬಿಕೊಂಡು ಖುಷಿ-ಖುಷಿಯಿಂದ ಸಮಯವನ್ನು ಕಳೆಯುತ್ತಿದ್ದವು. ಗೆಳೆಯರ ಜೊತೆ ಆಟದಲ್ಲಿ ಮಗ್ನರಾಗಿದ್ದೇವೆ ಎಂದರೆ ಸಮಯದ ಅರಿವೇ ಇರುತ್ತಿರಲಿಲ್ಲ, ಗೆಳೆಯರ ಜೊತೆ ಆಟ ಆಡೋದು, ಜಗಳ ಆಡೋದು, ಮಾತು ಬಿಡುವುದು ಮತ್ತೆ ನೆನಪು ಮಾಡಿಕೊಂಡು ಗೆಳತಿಯನ್ನು ಮಾತನಾಡಿಸುವುದು ಆಗ ನನಗೆ ಸಿಗುವ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ .

ಅಲ್ಲದೆ ನನ್ನ ಊರು ಚಿಕ್ಕ ಹಳ್ಳಿ, ಆ ಹಳ್ಳಿಯ ಸುತ್ತಮುತ್ತ ಕೆರೆ,ಹಳ್ಳ, ನದಿ,ತೋಟಗಳನ್ನು ನೋಡಲು ಬಲು ಸುಂದರ. ಆ ಬಾಲ್ಯದ ಜೀವನದಲ್ಲಿ ಅವುಗಳನ್ನೆಲ್ಲ ನೋಡಿ ತುಂಬಾ ಖುಷಿ ಪಡುತ್ತಿದ್ದೆ . ನಾನು ವಾಸ ಮಾಡಿದ ಪುಟ್ಟ ಮನೆ, ಹಳ್ಳಿ ಸೊಗಡಿನ ಊಟ, ಅಮ್ಮನ ಕೈ ತುತ್ತು, ಅಪ್ಪನ ಹೆಗಲು ಏರಿ ಕೂತಿರುವ ನೆನಪು ನನ್ನ ಕಣ್ಣು ಮುಂದೇನೆ ಬರುತ್ತದೆ . ಮುಂಜಾನೆಯಲ್ಲಿ ನಿದ್ದೆಯಿಂದ ಎದ್ದು ಕಣ್ಣು ಬಿಟ್ಟರೆ ಸಾಕು ಸೂರ್ಯನು ಕೆಂಪಗೆ ಉದಯಿಸುತ್ತಾನೆ. ಅದನ್ನು ನೋಡಲು ತುಂಬಾ ಖುಷಿ. ಹಸು ತನ್ನ ಕರುವಿಗೆ ಹಾಲು ಉಣಿಸುವ ಕ್ಷಣ ಮತ್ತು ಮೇಕೆ ಮರಿಯು ಚೆಂಗನೆ ನೆಗೆಯುವುದನ್ನು ಬಾಲ್ಯದಲ್ಲಿ ನೋಡಿದ ಕ್ಷಣ ಮನಸ್ಸಿಗೆ ಮುದ ನೀಡುತ್ತಿತ್ತು. ಅಲ್ಲದೆ ನನ್ನ ಹಳ್ಳಿಯಲ್ಲಿ ಪ್ರತಿ ಮನೆಯಲ್ಲಿ ದನ- ಕರು, ಕುರಿ-ಮೇಕೆ, ಕೋಳಿಗಳು ಇರುತ್ತಿದ್ದವು. ಅವುಗಳ ಜೊತೆಗೆ ಬೆಳೆದ ಕ್ಷಣ ಅವುಗಳ ಜೊತೆ ಆಟ ಆಡಿದ ಕ್ಷಣ ಇಂದಿಗೂ ಜ್ಞಾಪಕ ಮಾಡಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ಹೌದು ನನ್ನ ಹಳ್ಳಿಯ ಸೊಗಡಿನ ಜೀವನ, ಆಟ, ಗೆಳೆಯರ ಬಾಂಧವ್ಯ ಇಂದು ಸಿಗದು, ಏಕೆಂದರೆ ನಾವೆಲ್ಲರೂ ಬೆಳೆಯುತ್ತಾ ದೊಡ್ಡವರಾಗಿ ನಮ್ಮ ವಿದ್ಯಾಭ್ಯಾಸ ನಮ್ಮ ದಾರಿಗಳು ಬೇರೆ-ಬೇರೆಯಾಗಿ ನಮ್ಮ ಗೆಳೆಯರೆಲ್ಲ ಅವರೊಂದು ಕಡೆ ನಾವು ಒಂದು ಕಡೆಯಾಗಿದ್ದೇವೆ. ಆ ಕ್ಷಣ ಆ ನೆನಪು ಬಾಲ್ಯದ ಆಟಗಳು ಇಂದು ಇಲ್ಲ. ಆ ಬಾಲ್ಯದ ಜೀವನ ನೆನಪು ಮಾತ್ರ, ಮತ್ತೆ ಸಿಗದು ಆ ಬಾಲ್ಯದ ಜೀವನ.

ವಯಸ್ಸು ಎಷ್ಟೇ ಆದರೂ ನೆನಪಿಸಿಕೊಂಡರೆ ನಮ್ಮ ಬಾಲ್ಯ ಜೀವನದ ಒಂದು ಗಳಿಗೆ ಕಷ್ಟ ನಷ್ಟಗಳು ಮರೆಯಾಗಿ ಉತ್ಸಾಹ ಉಲ್ಲಾಸ ತುಂಬುವ ಶಕ್ತಿ ಬಾಲ್ಯ ಜೀವನಕ್ಕಿದೆ. ನಮ್ಮ ಪರಿಸರದಲ್ಲಿ ತಮ್ಮ ಬಾಲ್ಯ ಜೀವನದ ಸಂಭ್ರಮದಲ್ಲಿರುವ ಪುಟಾಣಿಗಳನ್ನು ಕಂಡಾಗ ಅವರ ಆಟೋಟಗಳು, ಜಗಳವಾಡಿ ಮತ್ತೆ ಒಂದುಗೂಡುವ ಸನ್ನಿವೇಶ, ಮತ್ತೆ ಮತ್ತೆ ನನ್ನನ್ನು ಬಾಲ್ಯ ಜೀವನದತ್ತ ಸೆಳೆಯುತ್ತದೆ.

ಲೇಖಕರ ಪರಿಚಯ:

ಕಾವ್ಯಶ್ರೀ ಎಚ್. ಎಂ.
ದ್ವಿತೀಯ ಬಿ.ಎಡ್.
ಸಂತ ಅಲೋಷಿಯಸ್ ಶಿಕ್ಷಣ ತರಬೇತಿ ಸಂಸ್ಥೆ, ಮಂಗಳೂರು.

Tags:

Comments powered by CComment

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.